ಗುಬ್ಬಿ: 2022-23 ನೇ ಸಾಲಿನ ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕವನ್ನು ಅಡಕೆ ಬೆಳೆ ಹೊರತು ಪಡಿಸಿ ಇತರೆ ತೋಟಗಾರಿಕೆ ಬೆಳೆಗಳಿಗೆ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಪ್ಪ ತಿಳಿಸಿದರು.
ಪ್ರತಿ ರೈತರು ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಅವಕಾಶವಿದೆ. ತರಕಾರಿ ಹಾಗೂ ವಾಣಿಜ್ಯ ಹೂವಿನ ಬೆಳೆಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ. ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಇತರೆ ರೈತರಿಗೆ ಶೇಕಡಾ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡಾ 90 ರಷ್ಟು ಸಹಾಯಧನ ನೀಡಲಾಗುತ್ತದೆ. ನಂತರದ 3 ಹೆಕ್ಟೇರ್ ಪ್ರದೇಶದ ಎಲ್ಲಾ ವರ್ಗದ ರೈತರಿಗೆ ಶೇಕಡಾ 45 ರಷ್ಟು ಸಹಾಯ ನೀಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಈ ಹಿಂದೆ ಅಳವಡಿಸಿದ್ದ ಸೂಕ್ಷ್ಮ ಹನಿ ನೀರಾವರಿ ಪದ್ಧತಿ ಹಾಳಾಗಿದ್ದರೆ ಅಥವಾ ಕಾರ್ಯ ನಿರ್ವಹಿಸದೆ ಇದ್ದು 7 ವರ್ಷ ಕಳೆದಿದ್ದರೆ ಅದೇ ಜಮೀನಿನಲ್ಲಿ ಮತ್ತೊಮ್ಮೆ ಘಟಕ ಅಳವಡಿಸಲು ಸಹಾಯಧನ ನೀಡಲಾಗುವುದು. ಜೊತೆಗೆ ವಿಕಲಚೇತನರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಸಹಾಯಧನ ನೀಡಲಾಗುವುದು. ಇಲಾಖೆ ಅನುಮೋದಿಸಿದ ಕಂಪೆನಿಯಿಂದ ಮಾತ್ರ ಘಟಕ ಅಳವಡಿಸಿಕೊಳ್ಳಬೇಕಿದೆ. ಆಸಕ್ತ ರೈತರು ಕೂಡಲೇ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.