ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಚನ್ನಬಸವೇಶ್ವರಸ್ವಾಮಿ ಹಾಗೂ ಶ್ರೀ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಅವರ ಹೂವಿನ ವಾಹನ ಉತ್ಸವ ಹಿನ್ನಲೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ದೇವಾಲಯದ ಆಡಳಿತ ವ್ಯವಸ್ಥೆ ಹದಗೆಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹದಿನೆಂಟು ಕೋಮಿನ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯಿತು.
ದೇವಾಲಯದ ದಾಸೋಹ ನಿಲಯದಲ್ಲಿ ಉಪವಿಭಾಗಾಧಿಕಾರಿ ಅಜಯ್ ಅವರ ನೇತೃತ್ವದ ಸಭೆಯಲ್ಲಿ ಭಕ್ತರ ಗಮನಕ್ಕೆ ಬಾರದೆ ಆಹ್ವಾನ ಪತ್ರಿಕೆ ಮುದ್ರಿಸಿರುವುದು ಅಲ್ಲದೇ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಅವರು ಮನಬಂದಂತೆ ದೇವಾಲಯ ನಡೆಸುತ್ತಾ ಭಕ್ತರ ಜೊತೆ ಅಸಹನೆಯಲ್ಲಿ ನಡೆದುಕೊಂಡ ಬಗ್ಗೆ ಪ್ರಶ್ನಿಸಿ ಮೊದಲು ನಮ್ಮ ಪ್ರಶ್ನೆಗೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ಸಭೆ ಬಹಿಷ್ಕರಿಸುವುದಾಗಿ ಸಭೆಯಿಂದ ಹೊರ ನಡೆದರು.
ಉಪ ವಿಭಾಗಾಧಿಕಾರಿಗಳು ಸಹ ಅಧಿಕಾರಿಗಳ ಓಲೈಸುವ ರೀತಿ ಮಾತನಾಡಿದ್ದಾರೆ. ಮಹಿಳಾ ಅಧಿಕಾರಿ ನಡೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ರೀತಿ ಮಾತು ಬೇಡ. ಆಹ್ವಾನ ಪತ್ರಿಕೆ ನಮ್ಮಗಳಿಗೆ ತಿಳಿಸದೆ ಯಾವುದೇ ಪೂರ್ವಭಾವಿ ಸಭೆ ನಡೆಸದೆ ಅನುಚಿತ ವರ್ತನೆ ಖಂಡಿಸಿ ದೇವಾಲಯ ಮುಂದೆ ಕೆಲ ಕಾಲ ದಿಢೀರ್ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ದೇವಾಲಯ ಮುಂದೆ ಕುಳಿತ ಮುಖಂಡರು, ಭಕ್ತರನ್ನು ಮನವೊಲಿಸುವ ಪ್ರಯತ್ನ ಮಾಡಿದ ತಹಶೀಲ್ದಾರ್ ಬಿ.ಆರತಿ ಅವರು ದೇವಾಲಯದ ಇಓ ಬದಲಾವಣೆ ಮಾಡಿ ಶ್ವೇತಾ ಅವರ ಸ್ಥಾನಕ್ಕೆ ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್ ಅವರ ಪ್ರಭಾರ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ಬಗ್ಗೆ ತಿಳಿಸಿದರು. ಕಳೆದ ಎರಡು ವರ್ಷದಿಂದ ಸಾಕಷ್ಟು ಅವ್ಯವಹಾರ ನಡೆದಿದೆ. ಇದರ ತನಿಖೆ ಆಗಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳು ಮಾತನಾಡುತ್ತಿಲ್ಲ. ನಮ್ಮಗಳ ಸಮಸ್ಯೆ ಅಲಿಸದೆ ಅಧಿಕಾರಿಗಳ ಏಕಮುಖ ಮಾತು ಕೇಳಲು ನಾವು ಸಿದ್ದವಿಲ್ಲ ಎಂದ ಮುಖಂಡರು ಇಓ ಶ್ವೇತಾ ಕೂಡಲೇ ಬದಲಾವಣೆ ಆಗಬೇಕು. ನಂತರ ಸಭೆ ನಡೆಸಲು ಪಟ್ಟು ಹಿಡಿದರು.
ಬಹಿಷ್ಕರಿಸಿದ ಕೆಲ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ತುಮಕೂರು ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್ ಪ್ರತಿಭಟನಾನಿರತರನ್ನು ಮನವೊಲಿಸಿ ಮರಳಿ ಸಭೆ ಆಹ್ವಾನಿಸಿದರು. ನಂತರ ಪುನರಾರಂಭವಾದ ಪೂರ್ವಭಾವಿ ಸಭೆಯಲ್ಲಿ ಹೂವಿನ ವಾಹನ ತಯಾರಿ ಬಗ್ಗೆ ಚರ್ಚಿಸಲಾಯಿತು. ದೇವಾಲಯದಲ್ಲಿ ನೀರು, ದಾಸೋಹ ವ್ಯವಸ್ಥೆ, ವಾಹನ ಸಂಚರಿಸುವ ರಸ್ತೆಯ ದುರಸ್ಥಿ, ಶುಚಿತ್ವ ಕಾಪಾಡುವುದು, ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ವಿದ್ಯುತ್ ತಂತಿ ಬದಲಾವಣೆ ಹಾಗೂ ಪೊಲೀಸ್ ಬಂದೋಬಸ್ತ್ ಬಗ್ಗೆ ಕೂಲಂಕುಷ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಟೇಲ್ ಕೆಂಪೇಗೌಡ, ಯಜಮಾನ್ ಕುಮಾರಯ್ಯ, ಪಣಗಾರ್ ನಿಜಗುಣಯ್ಯ, ಸೋಮಶೇಖರಯ್ಯ, ಪ್ರಕಾಶ್, ಬೆಸ್ಕಾಂ ಎಇಇ ಕರಿಯಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಪಿಎಸೈ ಮುತ್ತುರಾಜ್, ಕಂದಾಯ ನಿರೀಕ್ಷಕ ರಮೇಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ.