ನನ್ನನ್ನು ಗೆಲ್ಲಿಸಿದರೆ ಮಧುಗಿರಿ ಜಿಲ್ಲೆಯನ್ನಾಗಿಸುವೆ:ಕೆ.ಎನ್. ರಾಜಣ್ಣ

ತುಮಕೂರು: ಯಶಸ್ವಿನಿ ಯೋಜನೆಯಡಿ ನೊಂದಾಯಿತ 850ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ ೫ ಲಕ್ಷ ರೂ.ವರೆಗೆ ಆರೋಗ್ಯ ವಿಮಾ ಸೌಲಭ್ಯವಿದೆ. ಪ್ರತಿಯೊಬ್ಬರು ಈ ಸೌಲಭ್ಯ ಪಡೆಯಬೇಕೆಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಹೆಚ್ಚು ಮಂದಿ ರೈತರು ಸದಸ್ಯತ್ವ ನೊಂದಾಯಿಸಬೇಕೆಂದು ಹೇಳಿದರು.

ಯಶಸ್ವಿನಿ ಯೋಜನೆಗೆ ನೊಂದಾಯಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ವಾರ್ಷಿಕ ವಂತಿಕೆ ಪಾವತಿಗೆ ವಿನಾಯಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ಡಿಸಿಸಿ ಬ್ಯಾಂಕ್ ಶಾಖೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು ಎಂದರು.

ಈ ಹಿಂದೆ ಯಶಸ್ವಿನಿ ಯೋಜನೆ ಪುನರ್ ಸ್ಥಾಪನೆಗೆ ಒತ್ತಾಯಿಸಿದ್ದೆವು, ಮುಖ್ಯಮಂತ್ರಿಗಳು ಸಹಕಾರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತಂದಿರುವುದು ಅಭಿನಂದನೀಯ ಎಂದು ಹೇಳಿದರು.

ಹಾಲಿನ ಧರ ಹೆಚ್ಚಳಕ್ಕೆ ನನ್ನ ಬೆಂಬಲ:

ಹಾಲಿನ ಧರ ಹೆಚ್ಚಳಕ್ಕೆ ನನ್ನ ಬೆಂಬಲವಿದೆ. ಹಾಲಿನ ಧರ 10 ರೂ. ಬೇಕಾದರೂ ಹೆಚ್ಚಿಸಲಿ ಆದರೆ ಕಚೇರಿ ಕೆಲಸಕ್ಕೆ ಸಂಬಳ, ಸಾರಿಗೆಗೆ ಆ ಹಣವನ್ನು ಉಪಯೋಗಿಸಬಾರದು, 10 ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಇತ್ತೀಚೆಗೆ ಹಾಲು ಉತ್ಪಾದಕರ ಸ್ಥಿತಿ ಕಷ್ಟಕರವಾಗಿದೆ. ಫೀಡ್ಸ್ ದುಬಾರಿಯಾಗುತ್ತಿದೆ. ಹೀಗಾಗಿ ಎಷ್ಟೇ ಹೆಚ್ಚು ಮಾಡಿದರು ಅದನ್ನು ಉತ್ಪಾದಕರಿಗೆ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.

ಶಾಲೆಗಳ ಕೇಸರೀಕರಣಕ್ಕೆ ವಿರೋಧ:

ಶಾಲೆಗಳಲ್ಲಿ ಕೇಸರಿ ಕಾರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿವೇಕಾನಂದರು ದೇಶದ ಮಹಾನ್ ವ್ಯಕ್ತಿ ಅವರ ಹೆಸರನ್ನ ತೆಗೆದುಕೊಂಡು ಕೇಸರಿಕರಣ ಮಾಡುತ್ತಿರುವುದು ಸರಿಯಲ್ಲ, ವಿವೇಕಾನಂದರಿಗೆ ಅವಮಾನ ಮಾಡುತ್ತಿದ್ದಾರೆ. ವಿವೇಕಾನಂದರು ಶಾಲೆಗಳಿಗೆ ಬಣ್ಣ ಬಳಿಯಲು ಹೇಳಿದ್ದಾರಾ…? ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ವಿವೇಕಾನಂದರು ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಹೊರದೇಶದಲ್ಲಿ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ, ಇಂತಹ ವಿಚಾರದಲ್ಲಿ ಅವರ ಹೆಸರು ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನನ್ನನ್ನು ಗೆಲ್ಲಿಸಿದರೆ ಮಧುಗಿರಿ ಜಿಲ್ಲೆಯನ್ನಾಗಿಸುವೆ:

ಮಧುಗಿರಿ ಕ್ಷೇತ್ರದ ಜನ 2023ನೇ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಮಧುಗಿರಿ ಜಿಲ್ಲೆಯನ್ನಾಗಿ ಮಾಡಿಸಲು ಸರ್ಕಾರಕ್ಕೆ ಒತ್ತಡ ತರುತ್ತೇನೆ, ೫೪ ಕೆರೆಗಳಿಗೂ ನೀರು ತುಂಬಿಸುತ್ತೇನೆ, ರೈಲ್ವೆ ಕಾಮಗಾರಿಗಳನ್ನು ಸಂಪೂರ್ಣ ಮಾಡಿಸಲು ಶ್ರಮವಹಿಸುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ಇಟ್ಟು ಕೆಲಸ ಮಾಡುತ್ತೇನೆ ಎಂದರು.

ಸಿದ್ಧರಾಮಯ್ಯ ಎಲ್ಲೇ ನಿಂತರೂ ಗೆಲುವು ನಿಶ್ಚಿತ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಾರೆಯೇ ಎಂದು ಕೇಳದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲೇ ನಿಂತರೂ ಅವರ ಗೆಲುವು ನಿಶ್ಚಿತ ರಾಜ್ಯದ ಎಲ್ಲಾ ಕ್ಷೇತ್ರಗಳು ಅವರಿಗೆ ಸೇಫ್. ನಾನೂ ಸಹ ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ನಾನು ಸಹ ಅವರಿಗೆ ತಿಳಿಸಿದ್ದೆ. ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು, ಆದರೆ ಅವರಿಗೆ ಎಲ್ಲಿ ಅನುಕೂಲವಾಗುತ್ತದೆಯೋ ಅಲ್ಲಿ ಸ್ಪರ್ಧಿಸುತ್ತಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಮಾಸ್ ಲೀಡರ್ ಅವರನ ಸೋಲಿಸುವ ಬಗ್ಗೆ ಕೆಲವರು ಯೋಚಿಸುತ್ತಾರೆ ನಾವು ಅವರನ್ನು ಗೆಲ್ಲಿಸುವ ಬಗ್ಗೆ ಯೋಚಿಸುತ್ತೇವೆ. ರಾಜಕೀಯದಲ್ಲಿ ಸೋಲು-ಗೆಲುವು ಎಲ್ಲವೂ ಸಾಮಾನ್ಯ ಎಂದರು.

ಹೆಚ್.ನಿಂಗಪ್ಪ ಕಾಂಗ್ರೆಸ್‌ಗೆ:

ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ, ಇಂದು ಬೆಳಿಗ್ಗೆ ಅವರು ನನ್ನನ್ನು ಭೇಟಿಯಾಗಿದ್ದರು, ಇದಲ್ಲದೆ ಕಾಂಗ್ರೆಸ್ ಮುಖಂಡರ ಬಳಿಯೂ ಚರ್ಚಿಸಿದ್ದಾರೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಬರುತ್ತಾರೆ. ಮುಂದಿನ ವಿಧಾನಸಭೆಗೆ ಅವರಿಗೆ ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು, ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.

ಬಸ್ ಲೋಡ್ ಆಗಿದೆ:

ಕಾಂಗ್ರೆಸ್ ಪಕ್ಷಕ್ಕೆ ತುಮಕೂರು ಜಿಲ್ಲೆಯಿಂದ ಇನ್ನೂ ಯಾರಾದರೂ ಬರುವವರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಧ್ಯ ಕಾಂಗ್ರೆಸ್ ಪಕ್ಷದ ಬಸ್ ಲೋಡ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವವರು ಯಾರು ಇಲ್ಲ, ಆದರೆ ಬರುವವರ ಸಂಖ್ಯೆ ಹೆಚ್ಚಿದೆ. ಸದ್ಯ ಕಾಂಗ್ರೆಸ್ ಬಸ್ ಲೋಡ್ ಆಗಿದೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ಪರಮೇಶ್ವರ್‌ಗೆ ನಮ್ಮ ಬೆಂಬಲ:

ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ.ಜಿ. ಪರಮೇಶ್ವರ್ ಹಾಗೂ ನಮ್ಮ ಮಧ್ಯೆ ಸಂಬಂಧ ಚೆನ್ನಾಗಿದೆ. ಅವರು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು, ಮುಂದೆ ಅವರನ್ನು ಸಿಎಂ ಮಾಡುವ ಸಂದರ್ಭ ಬಂದರೆ ನಮ್ಮ ಬೆಂಬಲ ಕೂಡ ಅವರಿಗೆ ನೀಡುತ್ತೇವೆ. ನಮ್ಮ ಜಿಲ್ಲೆಯವರು ಸಿಎಂ ಆಗುತ್ತಾರೆ ಎಂದರೆ ಬೆಂಬಲ ಕೊಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಜೆ. ರಾಜಣ್ಣ, ಸಿಂಗದಹಳ್ಳಿ ರಾಜಕುಮಾರ್, ನಾರಾಯಣಗೌಡ, ಡಿಸಿಸಿ ಬ್ಯಾಂಕ್ ಸಿಇಒ ಶ್ರೀಧರ್, ಮಧುಗಿರಿ ಉಪವಿಭಾಗದ ಸಣ್ಣಪ್ಪಯ್ಯ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!