ಕೆಎಂಎಫ್ ಆಹಾರ ಘಟಕದಲ್ಲಿ ಅವ್ಯವಹಾರ ಆರೋಪ : ಗುತ್ತಿಗೆ ಆಧಾರದ ಕಾರ್ಮಿಕರ ಉಗ್ರ ಪ್ರತಿಭಟನೆ

ಗುಬ್ಬಿ: ಹೊರ ಗುತ್ತಿಗೆ ಆಧಾರದ ಕಾರ್ಮಿಕರ ಪಿಎಫ್, ಇ ಎಸ್ ಐ ಹಾಗೂ ಬೋನಸ್ ಹಣವನ್ನು ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳು ಗುಳುಂ ಮಾಡಿ ಕೋಟ್ಯಂತರ ರೂಗಳನ್ನು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಕೆ ಎಂ ಎಫ್ ಪಶು ಆಹಾರ ಘಟಕದ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕ ಮುಂದೆ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಟ್ಟು ಧರಣಿ ಕುಳಿತ ನೂರಾರು ಹೊರ ಗುತ್ತಿಗೆ ಕಾರ್ಮಿಕರು ನಮ್ಮಗಳ ದುಡಿದ ಹಣವನ್ನು ನುಂಗಿ ಹಾಕಿದ ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳು ಕಾರ್ಮಿಕರನ್ನು ಹೀನವಾಗಿ ನಡೆಸಿಕೊಂಡಿದ್ದಾರೆ. ಈ ಮಧ್ಯೆ ಹೊರ ರಾಜ್ಯದ ವಲಸೆ ಕೂಲಿ ಕಾರ್ಮಿಕರನ್ನು ಕರೆ ತಂದು ಅನಧಿಕೃತವಾಗಿ ಇಟ್ಟುಕೊಂಡು ದುಡಿಸಿಕೊಂಡು ಅತೀ ಕಡಿಮೆ ಕೂಲಿ ನೀಡಲಾಗುತ್ತಿದೆ. ಸ್ಥಳೀಯ ಕಾರ್ಮಿಕರ ಬೋನಸ್ ಹಣವನ್ನು ಲಪಟಾಯಿಸಿ 400 ಕ್ಕೂ ಅಧಿಕ ಕಾರ್ಮಿಕರ ಪಟ್ಟಿ ತಯಾರಿಸಿ ಬೋಗಸ್ ಲೆಕ್ಕ ಪತ್ರ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ಆಕ್ರೋಶ ಹೊರ ಹಾಕಿದರು.

ಗುತ್ತಿಗೆ ಪಡೆದ ಮೈಸೂರು ಮೂಲದ ರಂಗನಾಥ ಎಂಟರ್ ಪ್ರೈಸಸ್ ಮೂಲಕ ಇಲ್ಲಿ ಸುಮಾರು 230 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಲೆಕ್ಕಪತ್ರದಲ್ಲಿ 400 ಕ್ಕೂ ಅಧಿಕ ಮಂದಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇಲ್ಲಿ ಬೋನಸ್ ಹಣ, ಪಿ ಎಫ್ ಹಾಗೂ ಇ ಎಸ್ ಐ ಹಣ ಕಾರ್ಮಿಕರ ವೇತನದಲ್ಲಿ ಕಟಾವು ಮಾಡಲಾಗಿದೆ. ಅಂದಾಜು ಲೆಕ್ಕ ಒಬ್ಬರ ಖಾತೆಗೆ 1.30 ಲಕ್ಷ ರೂಗಳ ಜಮಾ ಆಗಬೇಕು. ಆದರೆ ನಮ್ಮಗಳ ಲೆಕ್ಕದಲ್ಲಿ ಒಬ್ಬರಿಗೆ 400, 600 ಹೀಗೆ ಜಮಾ ಆಗಿದೆ. ಆದರೆ ಇಲ್ಲಿ ಲೆಕ್ಕಪತ್ರದಲ್ಲಿ ಮಾತ್ರ ಕಾರ್ಮಿಕರೇ ಅಲ್ಲದ ವ್ಯಕ್ತಿಗಳ ಹೆಸರು ನಮೂದಿಸಿ ಬೋಗಸ್ ಲೆಕ್ಕ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ತನಿಖೆ ನಡೆಸಬೇಕು. ಕೂಡಲೇ ಎಲ್ಲಾ ಕಾರ್ಮಿಕರ ಹಣ ನೀಡಬೇಕು. ಜೊತೆಗೆ ಘಟಕಕ್ಕೆ ಬಾರದ ಗುತ್ತಿಗೆದಾರ ಸುರೇಶ್ ಗೌಡ ಸ್ಥಳಕ್ಕೆ ಬರಬೇಕು ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಒತ್ತಾಯಿಸಿದರು.

ಮೈಸೂರಿನ ರಂಗನಾಥ ಎಂಟರ್ ಪ್ರೈಸಸ್ ಹೆಸರಿನಲ್ಲಿ ಗುತ್ತಿಗೆ ನಿರ್ಹವಣೆ ಮಾಡುವ ಮಧ್ಯವರ್ತಿಗಳು ಕಾರ್ಮಿಕರನ್ನು ಹೀನವಾಗಿ ನಡೆಸಿಕೊಂಡಿದ್ದಾರೆ. ಕಾರ್ಮಿಕರ ಹಣ ಲಪಟಾಯಿಸಿದ್ದಲ್ಲದೆ ಪ್ರಶ್ನೆ ಮಾಡುವವರ ದನಿ ಹತ್ತಿಕ್ಕುವ ಕೆಲಸ ಮಾಡುತ್ತಾರೆ. ಮೂಲ ಗುತ್ತಿಗೆದಾರರನ್ನು ಈವರೆಗೂ ನಾವು ನೋಡೇ ಇಲ್ಲ. ಅವರ ಸಂಸ್ಥೆ ಹೆಸರಿನಲ್ಲಿ ಈ ಮಧ್ಯವರ್ತಿಗಳು ನಡೆಸಿರುವ ಅವ್ಯವಹಾರಕ್ಕೆ ಕಾರ್ಮಿಕರು ಬಲಿಯಾಗಿದ್ದಾರೆ. ಆರೋಗ್ಯ ಹದಗೆಟ್ಟರೆ ಅವರಿಗೆ ಯಾವುದೇ ಸೌಲಭ್ಯ ಸಿಗೋದಿಲ್ಲ. ಈ ಹಿಂದೆ ಒಬ್ಬರು ಮಹಿಳಾ ಕಾರ್ಮಿಕರು ಯಂತ್ರಕ್ಕೆ ಸಿಲುಕಿ ಮೃತಪಟ್ಟರು. ಅವರಿಗೂ ಭರವಸೆ ನೀಡಿ ಬಿಡಿಗಾಸು ನೀಡಿಲ್ಲ. ಮುಂದುವರೆದು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿದ್ದಾರೆ. ಅವರಿಗೂ ಯಾವುದೇ ಸೌಲಭ್ಯ ನೀಡದೆ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು ಎಂದು ಕಾರ್ಮಿಕ ಮುಖಂಡ ಮಧು ಆಗ್ರಹಿಸಿದರು.

ಘಟಕದ ಜಿಎಂ ಮಧುಸೂದನ್ ಹಾಗೂ ಕಾರ್ಮಿಕ ನಿರೀಕ್ಷಕಿ ಸುಶೀಲಾ ಅವರು ಮನವೊಲಿಸುವ ಪ್ರಯತ್ನ ಮಾಡಿದರು. ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು. ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ತುಮಲ್ ಅಧ್ಯಕ್ಷ ಮಹಾಲಿಂಗಯ್ಯ, ಸದಸ್ಯ ಚಂದ್ರಶೇಖರ್ ಹಾಗೂ ನಿರ್ದೇಶಕ ಪ್ರಕಾಶ್ ಮಾತುಕತೆಗೆ ಮುಂದಾದರು. ಲೆಕ್ಕಪತ್ರದ ಬೋಗಸ್ ಬಗ್ಗೆ ಕ್ರಮ ವಹಿಸಲು ಆಗ್ರಹಿಸಿದ ಕಾರ್ಮಿಕರು ಗುತ್ತಿಗೆದಾರ ಸ್ಥಳಕ್ಕೆ ಬರಬೇಕು ಎಂದು ಅಲ್ಲಿಯೇ ಅಡುಗೆ ಮಾಡಿ ಪ್ರತಿಭಟನೆ ಮುಂದುವರೆಸಿದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!