ಹಿಂಡಿಸಿಗೆರೆ ಗ್ರಾಪಂ ಅಧ್ಯಕ್ಷ ಚುನಾವಣೆ : 10 ಮತ ಪಡೆದ ವಿ.ಕೋಡಿಹಳ್ಳಿ ಪ್ರಕಾಶ್ ಪಂಚಾಯಿತಿ ಸಾರಥಿ

ಗುಬ್ಬಿ: ತಾಲ್ಲೂಕಿನ ಹಿಂಡಿಸಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುತೂಹಲದ ಮತ ಚಲಾವಣೆ ನಡೆದು ಎರಡು ಮತಗಳ ಅಂತರಲ್ಲಿ ವಿ.ಕೋಡಿಹಳ್ಳಿ ಪ್ರಕಾಶ್ ಗೆಲುವು ಸಾಧಿಸಿದರು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಲೋಕೇಶ್ ರಾಜೀನಾಮೆ ನೀಡಿ ತೆರವಾಗಿದ್ದ ಹಿನ್ನಲೆ ನಡೆದ ಚುನಾವಣೆಯಲ್ಲಿ ಆರಂಭದಲ್ಲಿ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿ ಇಬ್ಬರು ವಾಪಸ್ ಪಡೆದರು. ವಿ.ಕೋಡಿಹಳ್ಳಿ ಕ್ಷೇತ್ರದ ಪ್ರಕಾಶ್ ಹಾಗೂ ಹಿಂಡಿಸಿಗೆರೆ -1 ಕ್ಷೇತ್ರದ ಈರಣ್ಣ ಈರ್ವರು ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದರು. ಒಟ್ಟು 18 ಮಂದಿ ಸದಸ್ಯರ ಮತದಾನ ಪ್ರಕ್ರಿಯೆ ಆರಂಭವಾಗಿ ಅಂತಿಮವಾಗಿ ಪ್ರಕಾಶ್ 10 ಮತಗಳನ್ನು ಪಡೆದು ಗೆಲುವು ಕಂಡರು. ಪ್ರತಿಸ್ಪರ್ಧಿ ಈರಣ್ಣ ಅವರು 8 ಮತಗಳನ್ನು ಪಡೆದು ಎರಡು ಮತಗಳ ಆಂತರದಲ್ಲಿ ಪರಾಜಯ ಅನುಭವಿಸಿದರು.

ನೂತನ ಅಧ್ಯಕ್ಷ ವಿ.ಕೋಡಿಹಳ್ಳಿ ಪ್ರಕಾಶ್ ಸುದ್ದಿಗಾರರ ಜತೆ ಮಾತನಾಡಿ, ಸದಸ್ಯರ ವಿಶ್ವಾಸದಲ್ಲಿ ಜಯಗಳಿಸಿದ ನಾನು ಎಲ್ಲಾ ಸದಸ್ಯರ ಒಮ್ಮತ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಒದಗಿಸುವ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ವಸತಿ ಯೋಜನೆ ಅನುಷ್ಠಾನ ಹಾಗೂ ಆದಾಯ ಮೂಲ ಹೆಚ್ಚಿಸುವ ಕೆಲಸಗಳಿಗೆ ಎಲ್ಲಾ ಸದಸ್ಯರ ಒಮ್ಮತ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಕೃಷ್ಣೇಗೌಡ, ಶ್ವೇತಾ ಕುಮಾರ್, ಕವಿತಾ ಕೃಷ್ಣಮೂರ್ತಿ, ಲೋಕೇಶ್, ಸೀತಾರಾಮ ಸಿಂಗ್, ಮಮತಾ ರಮೇಶ್, ಶಶಿಕಲಾ ಕೆಂಪಣ್ಣ, ರೇಷ್ಮಾ ನಯಾಜ್, ಮುಖಂಡ ಸೋಮಶೇಖರ್ ಸೇರಿದಂತೆ ಎಲ್ಲರೂ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಚುನಾವಣೆಯನ್ನು ಕಂದಾಯ ನಿರೀಕ್ಷಕ ಗುರು ಪ್ರಸಾದ್, ಪಿಡಿಓ ಲಕ್ಷ್ಮೀ ಬೆಳ್ಳುಬ್ಬಿ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!