ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿವೆ-ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

ತುಮಕೂರು : ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಪ್ರತಿನಿತ್ಯ ಓದುಗರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿಂದು ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ವಿತರಕರ ಕೆಲಸವನ್ನು ಕನಿಷ್ಟವಾಗಿ ಕಾಣಬಾರದು. ಪತ್ರಿಕೆ ಜೀವಂತವಾಗಿರಲು ಪತ್ರಿಕಾ ವಿತರಕರೇ ಕಾರಣ ಎಂದು ತಿಳಿಸಿದರು.

ಐಎಎಸ್, ಐಪಿಎಸ್ ಅಧಿಕಾರಿಗಳು ಮಾತ್ರ ಸಾಧಕರಲ್ಲ. ಪತ್ರಿಕೆಯ ವಿತರಕರೂ ಸಹ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಉನ್ನತ ಸ್ಥಾನವನ್ನು ತಲುಪಿದ್ದಾರೆ. ತಂದೆ-ತಾಯಿ, ಸಮಾಜಕ್ಕೆ ಹೊರೆಯಾಗದೆ ಮೈಗಳ್ಳತನ ಬಿಟ್ಟು ಬ್ರಾಹ್ಮಿ ಕಾಲದಲ್ಲಿ ಸುದ್ದಿ ಪತ್ರಿಕೆಯನ್ನು ಮನೆ-ಮನೆಗೆ ತಲುಪಿಸುವ ಕೆಲಸ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಿಸಿದರು.

ಕಾರ್ಮಿಕರ ನಿಧಿಯಡಿ ಪತ್ರಿಕಾ ವಿತರಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಮಾಡಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕೆಂದು ಸಂಘಕ್ಕೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್ ವಾಡ್ ಮಾತನಾಡಿ, ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮನೆ-ಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದ ಅನುಭವ ಹಂಚಿಕೊಂಡರಲ್ಲದೆ, ಪತ್ರಿಕಾ ವಿತರಕರ ಸಂಘ ಇನ್ನಷ್ಟು ಬಲಗೊಳ್ಳಬೇಕು. ಸಂಘದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯಬೇಕೆಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ನಾಗಣ್ಣ ಮಾತನಾಡಿ, ಪತ್ರಿಕಾ ವಿತರಕರನ್ನು ನಿಕೃಷ್ಟವಾಗಿ ಕಾಣುವ ಕಾಲ ಹೋಗಿ ವೃತ್ತಿ ಗೌರವ ನೀಡುವ ಕಾಲ ಬಂದಿದೆ. ಕೋವಿಡ್ ಸಂದರ್ಭದಲ್ಲಿಯೂ ಅಂಜದೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದಾರೆ ಎಂದರಲ್ಲದೆ, ಪತ್ರಿಕೆ ಹಂಚುವ ಕೆಲಸ ಮಾಡುವುದರಿಂದ ಹಣ ಗಳಿಸಬಹುದಲ್ಲದೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ಬೆಳಗಿನ ಪರಿಶುದ್ಧ ಗಾಳಿ ಸೇವನೆ, ಸೈಕಲ್ ತುಳಿಯುವುದರಿಂದ ದೇಹಕ್ಕೆ ನವಚೈತನ್ಯ ದೊರೆಯುತ್ತದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಸೊಗಡು ವೆಂಕಟೇಶ್ ಮಾತನಾಡಿ, ಯಾವ ಕೆಲಸ ನಿಂತರೂ ಪತ್ರಿಕೆ ವಿತರಣೆ ಕೆಲಸ ನಿಲ್ಲುವುದಿಲ್ಲ. ವಿತರಕರು ಎದುರಿಸುವ ಸವಾಲು, ಸಮಸ್ಯೆಗಳಿಗೆ ಸಂಘವು ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿದ ಅವರು, ಪತ್ರಿಕಾ ವಿತರಕರ ಸಂಘದ ಶ್ರೇಯೋಭಿವೃದ್ಧಿಗಾಗಿ 5೦,೦೦೦ ರೂ.ಗಳ ಚೆಕ್ ಅನ್ನು ಕೊಡುಗೆಯಾಗಿ ನೀಡಿದರು.

ದಿನಪತ್ರಿಕೆ ಹಂಚಿಕೆದಾರರ ಸಂಘದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ ನಿರ್ಲಕ್ಷ್ಯಕ್ಕೊಳಗಾಗಿರುವ ಪತ್ರಿಕಾ ವಿತರಕರಿಗೆ ತಮ್ಮದೇ ಆದ ಅಸ್ತಿತ್ವ ಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರ ಸಂಘವನ್ನು ರಚಿಸಲಾಗಿದೆ ಎಂದು ತಿಳಿಸಿದರಲ್ಲದೆ, ಪತ್ರಿಕೆಯನ್ನು ಓದುಗರಿಗೆ ತಲುಪಿಸಲು ವಿತರಕರು ಬೇಕೇ ಬೇಕು. ಆದರೆ ಬೇಡಿಕೆಗಳನ್ನು ಇಟ್ಟಾಗ ವಿತರಕರು ಯಾರಿಗೂ ಬೇಡವಾಗಿದ್ದಾರೆ. ರಾಜ್ಯದಲ್ಲಿ ಸುಮಾರು 7೦,೦೦೦ ಮಂದಿ ಪತ್ರಿಕಾ ವಿತರಕರಿದ್ದು, ಪ್ರತಿ ಜಿಲ್ಲೆಗೆ ತಲಾ 1 ಕೋಟಿ ರೂ.ಗಳನ್ನು ವಿತರಕರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಪತ್ರಕರ್ತ ಚಿ.ನಿ. ಪುರುಷೋತ್ತಮ್ ಮಾತನಾಡಿ ಪತ್ರಿಕೆ ಹಂಚುವವರ ಜೀವಕ್ಕೆ ಭದ್ರತೆ ಇಲ್ಲ. ಪತ್ರಿಕೆ ವಿತರಣೆ ಮಾಡುವ ಸಂದರ್ಭದಲ್ಲಿ ಅಪಘಾತಕ್ಕೀಡಾದರೆ, ಸಂತ್ರಸ್ತರ ಕುಟುಂಬಕ್ಕೆ ಯಾವುದೇ ನೆರವಿನ ಸೌಲಭ್ಯ ದೊರೆಯುತ್ತಿಲ್ಲ. ಪತ್ರಿಕೆ ಓದುಗರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದರಿಂದ ವಿತರಕರ ಕಮೀಷನ್ ಹಣವೂ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯ, ಆಸ್ಪತ್ರೆ ಖರ್ಚು, ಮಾಸಾಶನ ಸೌಲಭ್ಯ, ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ, ಪತ್ರಿಕಾ ವಿತರಣೆ ಸಂದರ್ಭದಲ್ಲಿ ಮೃತಪಟ್ಟ ವಿತರಕರ ಕುಟುಂಬಕ್ಕೆ ೧೦ಲಕ್ಷ ರೂ. ಪರಿಹಾರ, ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ರಾಜ್ಯೋತ್ಸವ ಸಂದರ್ಭದಲ್ಲಿ ವಿತರಕರಿಗೂ ಗೌರವ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪತ್ರಿಕಾ ಭವನದ ನವೀಕರಣಕ್ಕಾಗಿ ಅನುದಾನ ಮಂಜೂರಾತಿಗಾಗಿ ಸಹಕಾರ ನೀಡಿದ ಜಿಲ್ಲಾಧಿಕಾರಿಗಳಿಗೆ ಹಾಗೂ ಪತ್ರಕರ್ತರ ನಿಧಿಗೆ ಧನ ಸಹಾಯ ನೀಡಿದ ಛಾಯಾಗ್ರಾಹಕ ಶಾಂತರಾಜು, ಸತೀಶ, ಮಧುಕರ್, ಸೊಗಡು ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕೊರಟಗೆರೆ ತಾಲ್ಲೂಕು ಶ್ರೀ ಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಪತ್ರಿಕಾ ವಿತರಕರು ತಮ್ಮ ಕೆಲಸವನ್ನು ಕನಿಷ್ಠವೆಂದು ಭಾವಿಸಬಾರದು. ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ ಅಬ್ದುಲ್‌ಕಲಾಂ ಅವರು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು ಎಂದರಲ್ಲದೆ, ವಿತರಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ. ಸಂಘಟನೆಯಿಂದ ಎಲ್ಲರೂ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಪತ್ರಿಕೆಗಳು ಹಾಗೂ ವಿತರಕರು ಎರಡು ಕಣ್ಣುಗಳಿದ್ದಂತೆ. ವಿತರಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಸುದ್ದಿ ಬರೆಯುವ ಮೂಲಕ ಪತ್ರಿಕೆಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜೆ.ಪಿ. ಶಿವಣ್ಣ ಅವರು ತಮ್ಮ ಕ್ಲಬ್ ವತಿಯಿಂದ ಎಲ್ಲಾ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿದರು. ವಾಸುದೇವ ಎನ್.ನಾದೂರು ಸ್ವಾಗತಿಸಿದರು. ಮಂಜುನಾಥ ನಿರೂಪಿಸಿದರು. ಪತ್ರಿಕೆ ವಿತರಕರ ಸಂಘದ ಜಿಲ್ಲಾಧ್ಯಕ್ಷ ಚೆಲುವರಾಜು(ರಘು) ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಪತ್ರಿಕಾ ವಿತರಕರು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಸ್ ಪ್ರಯಾಣಿಕರಿಗೆ ಕನ್ನಡ ಪತ್ರಿಕೆಗಳನ್ನು ಉಚಿತವಾಗಿ ಹಂಚಿದರು. ಪತ್ರಿಕೆಯೊಂದಿಗೆ ಸಿಹಿ ಹಂಚಿ ಕನ್ನಡ ಪತ್ರಿಕೆಯನ್ನು ಕೊಂಡು ಓದಿ ಎಂಬ ಸಂದೇಶವನ್ನು ಸಾರಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!