ತುಮಕೂರು: ಪರಿಶಿಷ್ಠ ಪಂಗಡದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಮತ್ತು ಕೇಂದ್ರ, ರಾಜ್ಯಗಳ ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರಗಳು ನೀಡಿರುವ ಭರಪೂರ ಕೊಡುಗೆಗಳಿಗೆ ಅಭಿನಂದಿಸಲು ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ಘಟಕವು ಬಳ್ಳಾರಿಯಲ್ಲಿ ಇದೇ ನವಂಬರ್ 20 ರಂದು ನಡೆಸುವ ಬೃಹತ್ ನವಶಕ್ತಿಸಮಾವೇಶಕ್ಕೆ ತುಮಕೂರು ಸಂಘಟನಾತ್ಮಕ ಜಿಲ್ಲೆಯಿಂದ 5000 ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಎ.ವಿಜಯಕುಮಾರ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ನಡೆಯುವ ಬೃಹತ್ ಎಸ್.ಟಿ. ಮೋರ್ಚಾ ಸಮಾವೇಶದಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದು, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಕಾರ್ಯಕರ್ತರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಬಿ.ಶ್ರೀರಾಮುಲು, ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಕೇಂದ್ರ-ರಾಜ್ಯ ಸರ್ಕಾರಗಳ ಹಾಲಿ, ಮಾಜಿ ಸಚಿವರು, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಪರಿಶಿಷ್ಟರ ಸಂತಸ : ಬಿಜೆಪಿಗೆ ಬೆಂಬಲ
ಪರಿಶಿಷ್ಟ ಜಾತಿಗೆ (ಎಸ್.ಸಿ) ಶೇಕಡ 15 ರಿಂದ 17 ರಷ್ಟು ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ)ಕ್ಕೆ ಶೇಕಡ 3 ರಿಂದ 7 ರಷ್ಟು ಮೀಸಲಾತಿ ಪ್ರಮಾಣವನ್ನು ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಸರ್ಕಾರ ಮಹತ್ತರ ಹಾಗೂ ಅಭೂತಪೂರ್ವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿರುವುದು ಪರಿಶಿಷ್ಟರ ಬಿಜೆಪಿಯ ಬದ್ದತೆಗೆ ಸ್ಪಷ್ಟ ನಿದರ್ಶನವಾಗಿದೆ. ಕಾಂಗ್ರೆಸ್ ಪಕ್ಷವು ದೇಶ, ರಾಜ್ಯ ಆಳ್ವಿಕೆ ಮಾಡಿದ 60 ವರ್ಷಗಳ ಕಾಲ ಪರಿಶಿಷ್ಟರನ್ನು ವಂಚಿಸಿದ್ದು ಕೇವಲ ಮತಬ್ಯಾಂಕ್ ಆಗಿ ನಡೆಸಿಕೊಂಡಿದ್ದವು ಎಂದು ಎ.ವಿಜಯಕುಮಾರ್ ತಿಳಿಸಿ, ಕೇಂದ್ರ, ರಾಜ್ಯ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರಗಳು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಹಲವು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಮನ ಗೆದ್ದಿದ್ದು, ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಿಶಿಷ್ಟರು ಮತ ಹಾಕುವ ಮೂಲಕ ಋಣವನ್ನು ತೀರಿಸಲು ಬದ್ದರಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕಿದೆ ಎಂದಿದ್ದಾರೆ.
ಪ್ರಧಾನಿ ಮೋದಿಜೀಗೆ ಅಭಿನಂದನೆ
ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರಮೋದಿರವರು ಮಹರ್ಷಿ ವಾಲ್ಮೀಕಿರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ, ಪರಿಶಿಷ್ಟ ಪಂಗಡದ ಸಮಾಜದ ಆತ್ಮಾಭಿಮಾನವನ್ನು ಹೆಚ್ಚಿಸಿದ್ದಾರೆಂದು ಎ.ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.