ಪಾವಗಡ: ಮೌಲ್ಯಯುತ ಶಿಕ್ಷಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕು ಎಂದು ಶಾಸಕರು ಹಾಗೂ ಮಾಜಿ ಸಚಿವರು ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಾವಗಡ,ನವೀನ ಜಾಗೃತಿ ಮತ್ತು ಕ್ರೀಡೆ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಕಾಲೇಜುಗಳಲ್ಲೊಂದು ಜಾಗೃತಿ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆಧುನಿಕ ಬದುಕಿನಲ್ಲಿ ಶಾಲಾ ಕಾಲೇಜು ಮಕ್ಕಳು ತಮ್ಮ ಶಿಕ್ಷಣದ ಆರೋಗ್ಯಕರ ಹಾದಿಯನ್ನೆ ಮರೆಯುತ್ತಿದ್ದಾರೆ. ಹಾಗಾಗಿ ಪಾರದರ್ಶಕ ಮೌಲ್ಯಯುತ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ, ಸಾಮಾಜಿಕ ಜಾಗೃತಿ ಅರಿವಿನ ಕುರಿತಾಗಿ ನವೀನ್ ಕಿಲಾರ್ಲಹಳ್ಳಿ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಹಕಾರಿಯಾಗುತ್ತವೆ.ನನಗೆ ತುಂಬಾ ಹೆಮ್ಮೆಯಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಕ್ಕಳು ಶಿಸ್ತುಬದ್ಧ ಅಧ್ಯಯನದಿಂದ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರತಿಯೊಬ್ಬರು ಗುರುಗಳ ಮಾತಿನಲ್ಲಿ ಆಸಕ್ತಿವಹಿಸಿ ಪಾಲಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಅವರು ಇಂದಿನ ಪೈಪೋಟಿ ಬದುಕಿನಲ್ಲಿ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.ಮಕ್ಕಳ ಉತ್ತಮ ಭವಿಷ್ಯಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ. ಆ ಹಿನ್ನೆಲೆ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿಯವರಿಗೆ ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲು ಅನುಕೂಲ ಕಲ್ಪಿಸುವಂತೆ ಶಾಲಾ ಮುಖ್ಯಸ್ಥರುಗಳಿಗೆ ಸೂಚಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ‍್ರಾಂಶುಪಾಲರು ಬಸವಲಿಂಗಪ್ಪ ಮಾತನಾಡಿ ಇಂದಿನ ಕ್ಷಣಿಕ ಮೋಜಿನ ಹಿಂದೆ ಬೀಳದೆ,ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ನವೀನ್ ಜಾಗೃತಿ ಮತ್ತು ಕ್ರೀಡೆ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ನವೀನ್ ಕಿಲಾರ್ಲಹಳ್ಳಿ ಮಾತನಾಡಿ ಕಳೆದ ಹದಿನಾಲ್ಕು ವರ್ಷಗಳಿಂದ ಜನರಲ್ಲಿ ಮೌಡ್ಯಚಾರಣೆ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತ ಬರುತ್ತಿದ್ದೇನೆ.ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯ, ಸಾಮಾಜಿಕ ಜಾಗೃತಿಯ ಕೊರತೆಯಿಂದ ಉಜ್ವಲವಾಗಿಸಿಕೊಳ್ಳುವ ಬದುಕನ್ನ ಚಿಕ್ಕ ವಯಸ್ಸಿಗೆ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಪ್ರಯತ್ನಿಸಿ ಎಲ್ಲಾ ಶಾಲಾ ಕಾಲೇಜು ಹಂತದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.
ಉಪ ಪ್ರಾಂಶುಪಾಲರು ಧನಂಜಯ ಅವರು ಮಾತನಾಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಂತಹ ಕಾರ್ಯಕ್ರಮ ಅತ್ಯಾವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಕಾಲೇಜುಗಳೊಂದು ಜಾಗೃತಿ ಕಾರ್ಯಕ್ರಮ ಪ್ರತಿಯೊಂದು ಪ್ರೌಢಶಾಲಾ ಮತ್ತು ಕಾಲೇಜು ಹಂತದಲ್ಲಿ ನಡೆಯುತ್ತದೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಿ.ವೇಲುರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ,ಶಿಕ್ಷಣ ಸಂಯೋಜಕರು ಶಿವಮೂರ್ತಿನಾಯಕ್,ಚಂದ್ರಶೇಖರ್, ಶಿಕ್ಷಕರು ವಿಜಯ್ ಕುಮಾರ್,ನಾಗರಾಜು, ಕನ್ನಮೇಡಿ ಮಾರುತಿ, ಮಾರುತೀಶ್ , ಮೂರ್ತಿ,ಕಿರಣ್, ರಾಕೇಶ್ , ಶಿವು, ಸಿಬ್ಬಂಧಿ ವರ್ಗದವರು ಇದ್ದರು