ಗುಬ್ಬಿ: ಪಟ್ಟಣ ಅಭಿವೃದ್ಧಿಗೆ ದೊಡ್ಡ ತೊಡರು ಆಗಿರುವ ಗುಬ್ಬಿ ಪಪಂ ಅಧ್ಯಕ್ಷರು ಕಳೆದ ಮೂರೂವರೆ ತಿಂಗಳಿಂದ ನಾಪತ್ತೆಯಾಗಿದ್ದಾರೆ. ಅವರ ನಾಪತ್ತೆ ನನಗೆ ಆಘಾತವಾಗಿದೆ. ಅವರನ್ನು ಹುಡುಕಿಕೊಡಲು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಹೇರೂರು ಗ್ರಾಪಂ ನೂತನ ಕಛೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಪಪಂ ಅಧ್ಯಕ್ಷರ ನಾಪತ್ತೆ ನನಗೆ ಭಯ ತಂದಿದೆ. ಆಘಾತವೂ ಆಗಿದೆ. ಪೊಲೀಸರು ಬಿಟ್ಟು ಕಳುಹಿಸಿದ ನಂತರ ಕಳೆದು ಹೋದರಾ ಅಥವಾ ಕಿಡ್ನಾಪ್ ಆಗಿದ್ದಾರಾ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇಡೀ ತಾಲ್ಲೂಕಿಗೆ ತಿಳಿದಂತೆ ಅಧ್ಯಕ್ಷರು ಭೂ ಹಗರಣದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿ ಆಗಿದ್ದು ತಿಳಿದಿದೆ. ಬೆಳಗಿನ ಜಾವ ಅವರನ್ನು ಬಿಟ್ಟು ಕಳುಹಿಸಿದ ನಂತರ ಎಲ್ಲಿ ಅಂತ ಹುಡುಕೋಣ ತಿಳಿಯುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲೇಬೇಕು. ಅಭಿವೃದ್ದಿ ಕುಂಠಿತಕ್ಕೆ ಕಾರಣವಾದ ಅಧ್ಯಕ್ಷರ ಹುಡುಕುವ ಅನಿವಾರ್ಯ ಎದುರಾಗಿದೆ ಎಂದು ಕಿಡಿಕಾರಿದ ಅವರು ನಕಲಿ ಎಂಬುದು ಬಿಜೆಪಿ ಸರ್ಕಾರದಲ್ಲಿ ನಿತ್ಯ ಕಾಯಕವಾಗಿದೆ. ನಮ್ಮಲ್ಲೇ 500 ನಕಲಿ ಖಾತೆದಾರರನ್ನು ಸೃಷ್ಟಿಸಿದರು. ಮತ್ತೇ ಹುಡುಕಿದಾಗ 683 ನಕಲಿ ದಾಖಲೆ ಸಿಕ್ಕಿವೆ. ಸದ್ಯ ಎಲ್ಲವೂ ನಕಲಿ ಹೇಳಿಕೆ, ಚುನಾವಣೆಯ ಎವಿಎಂ ಕೂಡಾ ನಕಲಿ ಹೀಗೆ ಸರ್ಕಾರವೇ ನಕಲಿ ಎಂದು ವ್ಯಂಗ್ಯ ಮಾಡಿದರು.
ನರೇಗಾ ಯೋಜನೆ ಬಳಕೆಯಲ್ಲಿ ಪಾವಗಡ ಮತ್ತು ಶಿರಾ ತಾಲ್ಲೂಕು ಮಾತ್ರ ಮುಂಚೂಣಿ. ಉಳಿದ ತಾಲ್ಲೂಕು ಕೆಲಸ ಮಾಡಿಲ್ಲ ಅನ್ನುವ ಸರ್ಕಾರ ನರೇಗಾ ಯೋಜನೆ ಬಿಲ್ ಗಳು ಇಂದಿಗೂ ಆಗಿಲ್ಲ. ಎರಡು ವರ್ಷದಿಂದ ಹಣವನ್ನು ನೀಡಿಲ್ಲ. ಹೀಗೆ ವಸತಿ ಯೋಜನೆಯ ಹಣವನ್ನೂ ಸಹ ನೀಡಿಲ್ಲ. ರಾಜಕಾರಣಿಗಳು ಭಾಷಣದಲ್ಲಿ ಮಾತ್ರ ನರೇಗಾ ಬಳಸಲು ಸೂಚಿಸಿ ಹಣ ಬಿಡುಗಡೆ ವಿಚಾರ ಮಾತ್ರ ಮಾತನಾಡಲ್ಲ ಎಂದ ಅವರು ಗ್ರಾಮ ಪಂಚಾಯಿತಿ ಮೂಲಕ ಮಾತ್ರ ಹಳ್ಳಿಗಳ ಅಭಿವೃದ್ದಿ ಸಾಧ್ಯ. ಹದಗೆಟ್ಟ ವ್ಯವಸ್ಥೆ ಸರಿಪಡಿಸಿಕೊಳ್ಳಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸಂಪನ್ಮೂಲ ಕ್ರೋಢೀಕರಣ ಮಾಡುವುದು, ಆದಾಯ ಹೆಚ್ಚಳ ಮಾಡುವುದು ಹಾಗೂ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಬಳಸುವ ಕೆಲಸ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ಮಾಡಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ಗ್ರಾಮೀಣಾಭಿವೃದ್ಧಿಗೆ ಪೂರಕ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಪಂಚಾಯಿತಿಯ ಪ್ರದೇಶದಲ್ಲಿ ಮಳಿಗೆ ನಿರ್ಮಾಣ, ಗೋದಾಮು ನಿರ್ಮಾಣ ಹೀಗೆ ಆದಾಯ ಹೆಚ್ಚಿಸಿಕೊಂಡು ಮಾದರಿ ಪಂಚಾಯಿತಿ ನಿರ್ಮಿಸಿಕೊಳ್ಳಿ ಎಂದು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಕೆಲಸ ಮಾಡಿದ್ದೇವೆ. ಹೊಸ ಕಟ್ಟಡ ಅವಶ್ಯಕತೆ ಅರಿತು ಒಂದು ವರ್ಷದಲ್ಲಿ ನೂತನ ಕಚೇರಿ ಆಕರ್ಷಣೀಯವಾಗಿ ನಿರ್ಮಿಸಲಾಗಿದೆ. ಜೊತೆಗೆ ಮಹಡಿಯಲ್ಲಿ ಸ್ತ್ರೀ ಶಕ್ತಿ ಸಂಘದ ಸಭೆಗೆ ಸಭಾಂಗಣ ಸಿದ್ದಪಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಸಂಜೀವಿನಿ ಕಾರ್ಯಾಗಾರ ಘಟಕ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಇಓ ಶಿವಪ್ರಕಾಶ್, ತಾಲ್ಲೂಕು ಯೋಜನಾಧಿಕಾರಿ ಜಗನ್ನಾಥಗೌಡ, ತಿಪಟೂರು ತಾಲ್ಲೂಕು ಹಿಂಡಿಸಿಗೆರೆ ಗ್ರಾಪಂ ಸದಸ್ಯ ರಾಘವೇಂದ್ರ ಸದಸ್ಯರಾದ ಶ್ರೀನಿವಾಸ್, ರಾಧಮಣಿ, ಸೈಯದ್ ಜಿಲಾನಿ, ಉಮಾದೇವಿ, ಜಯಣ್ಣ, ರಾಧಾ, ಶೋಭಾ, ರೇಣುಕಪ್ಪ, ವೆಂಕಟೇಶ್, ರಮೇಶ್ ಸೇರಿದಂತೆ ಎಲ್ಲಾ ಸದಸ್ಯರು, ಪಿಡಿಒ ಪ್ರಶಾಂತ್ ಭಾಗವಹಿಸಿದ್ದರು.