ಗುಬ್ಬಿ: ಗ್ರಾಮೀಣ ಜನರ ಬಳಿಗೆ ತಾಲ್ಲೂಕು ಆಡಳಿತ ಬರುವ ಈ ವಿನೂತನ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನವಂಬರ್ 19 ರಂದು ಸಿ.ಎಸ್.ಪುರ ಹೋಬಳಿ ಹೊರಕೆರೆ ಗ್ರಾಮದಲ್ಲಿ ಸಕಲ ಸಿದ್ಧತೆಯಲ್ಲಿ ಆಯೋಜಿಸಲಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಗಡಿ ಭಾಗದ ದೊಡ್ಡ ಗೋರಾಘಟ್ಟ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿ.ಎಸ್.ಪುರ ಹೋಬಳಿಯ ಜನರಿಗೆ ಈ ಕಾರ್ಯಕ್ರಮ ಉಪಯೋಗವಾಗಲಿದೆ. ಮನೆ ಬಾಗಿಲಿಗೆ ಸರ್ಕಾರ ಬಂದು ನಿಮ್ಮ ಕೆಲಸ ಕಾರ್ಯಗಳು ನಡೆಸಲಿದೆ. ಎಲ್ಲಾ ಇಲಾಖಾಧಿಕಾರಿಗಳು ಒಂದೇ ಸೂರಿನಡಿ ಇದ್ದು ಜನರ ಅಹವಾಲು ಅರ್ಜಿ ಸ್ವೀಕರಿಸಿ ತೀರ್ಮಾನ ಮಾಡಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ಈ ಹಿಂದೆ ಸಿ.ಎಸ್. ಪುರದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮ ಯಶಸ್ವಿಯಾಗಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಇಲ್ಲಿ ಪಿಂಚಣಿ, ವಿವಿಧ ವೇತನ, ಸ್ಮಶಾನಕ್ಕೆ ಜಾಗ ಹಸ್ತಾಂತರ ಹೀಗೆ ಅನೇಕ ಕಾರ್ಯ ನಡೆದು ಪವತಿ ಖಾತೆ, ಸರ್ವೇ ಅರ್ಜಿ ಗಳನ್ನೂ ಸ್ವೀಕರಿಸಿ ಬಹುಬೇಗ ಉತ್ತರ ನೀಡಲಿದ್ದಾರೆ. ಸ್ಥಳದಲ್ಲೇ ಕೆಲ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಕೆಲವು ಅರ್ಜಿಗಳಿಗೆ ಹಿಂಬರಹ ಬರೆದು ಉತ್ತರ ನೀಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ನಡೆದ ಭೂ ಹಗರಣ ಎಲ್ಲರಿಗೂ ತಿಳಿದಿದೆ. ಸಿಬ್ಬಂದಿಗಳು ಅಮನುತುಗೊಂಡಿದ್ದು ಕೊರತೆ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಸಿಬ್ಬಂದಿಗಳ ನಿಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ. ನಮ್ಮ ಹೋಬಳಿಯಲ್ಲಿ ಯಾವುದೇ ಒತ್ತಡದ ಕೆಲಸವಿಲ್ಲ. ಯಾವ ಹಗರಣವು ಇಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ನೇರ ಜನರ ಸಮಸ್ಯೆ ಆಲಿಸಬಹುದು. ಕಾನೂನು ರೀತಿ ಕೆಲಸ ಮಾಡಲು ಸೂಚಿಸಿದ್ದು ಯಾವುದೇ ಒತ್ತಡಕ್ಕೆ ಮಣಿಯದೆ ಕರ್ತವ್ಯ ಮಾಡಲು ತಿಳಿಸಲಾಗಿದೆ ಎಂದ ಅವರು ಮಾಯಸಂದ್ರ ಕಾರ್ಯಕ್ರಮದಲ್ಲಿ ಸಚಿವರ ಕಾರ್ಯಕ್ರಮ ಯಶಸ್ವಿಯಾಗಿತ್ತು. ಅದೇ ರೀತಿ ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಮುಖಂಡ ಕೊಂಡಜ್ಜಿ ವಿಶ್ವನಾಥ್ ಇತರರು ಇದ್ದರು.
ವರದಿ : ಜಿ.ಆರ್.ರಮೇಶ ಗೌಡ, ಗುಬ್ಬಿ.