ತುಮುಲ್ ಬಜೆಟ್ ನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ಕೆ ಹಣ ಮೀಸಲು : ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ

ಗುಬ್ಬಿ: ಹೈನು ಉದ್ಯಮದಲ್ಲಿ ಕ್ರಾಂತಿ ಮಾಡಿದ ತುಮಕೂರು ಹಾಲು ಒಕ್ಕೂಟ ಪ್ರತಿ ವರ್ಷ ಸಾಮಾಜಿಕ ಸೇವಾ ಕಾರ್ಯ ಮಾಡಲು ನಿರ್ಧರಿಸಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದಲ್ಲಿ ತುಮಕೂರು ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್, ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ, ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಂಘ, ತುಮುಲ್ ಹಾಗೂ ಕನ್ನಡ ಯುವಕ ಸಂಘ ಸಹಯೋಗದಲ್ಲಿ ನಡೆದ ರೈತರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರ ಆರೋಗ್ಯ ಕಾಪಾಡಲು ಪ್ರತಿ ತಾಲ್ಲೂಕಿಗೆ ಆರೋಗ್ಯ ಶಿಬಿರ ಮಾಡಲು ಮೂರು ಲಕ್ಷ ರೂಗಳನ್ನು ನೀಡಲಾಗುತ್ತಿದೆ ಎಂದರು.

ರಕ್ತದಾನ ಶ್ರೇಷ್ಠ ಕಾರ್ಯವಾಗಿದೆ. ಮತ್ತೊಂದು ಜೀವ ಉಳಿಸುವ ಕೆಲಸ ಮಾಡಲು ಈ ರಕ್ತ ಬಳಕೆ ಆಗುತ್ತಿದೆ ಎಂದ ಅವರು ರೈತರು ಮೃತಪಟ್ಟಲ್ಲಿ 50 ಸಾವಿರ ರೂಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 8 ಲಕ್ಷ ಲೀಟರ್ ಹಾಲು ಉತ್ಪಾದಿಸುವ ರೈತರಿಗೆ ಒಳ್ಳೆಯ ದರ ನೀಡಲು ನಿರ್ಧರಿಸಿ ನವಂಬರ್ ಮಾಹೆಯಿಂದಲೇ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.50 ರೂಗಳನ್ನು ನೀಡಲಾಗುತ್ತಿದೆ. ರಾಸುಗಳಿಗೆ ಈಗ ಕಾಣುತ್ತಿರುವ ಗಂಟು ರೋಗ ಕಾಯಿಲೆ ಸಾಕಷ್ಟು ತೊಂದರೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಸುಗಳು ಅಕಾಲಿಕ ಮೃತ್ಯುಗೆ ತುತ್ತಾದರೆ ವಿಮೆ ನೀಡಲು 17 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಬಣವೆ ಸುಟ್ಟರೆ ಹತ್ತು ಸಾವಿರ ರೂಗಳು ನೀಡಲಾಗುತ್ತಿದೆ ಎಂದ ಅವರು ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ 25 ಸಾವಿರ ರೂಗಳ ಸಹಾಯಧನ ನೀಡಲಾಗುತ್ತಿದೆ. ಈ ಜೊತೆಗೆ 223 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲು ಹಾಸ್ಟೆಲ್ ನಡೆಸುತ್ತಿದ್ದೇವೆ. ಮುಂದಿನ ಸಾಲಿನಲ್ಲಿ 400 ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲು 160ಕೋಟಿ ಮೀಸಲು ಹಾಗೂ ಮೆಗಾ ಡೈರಿಗಳನ್ನು ಹೈಜೇನಿಕ್ ವ್ಯವಸ್ಥೆಯಲ್ಲಿ ಆರಂಭಿಸಲಾಗಿದೆ ಎಂದು ವಿವರಿಸಿದರು.

ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಗ್ರಾಮೀಣ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದು ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಹಾಲು ಉತ್ಪಾದಕರ ಯೋಗಕ್ಷೇಮ ವಿಚಾರಣೆ ಮಾಡುವ ಕೆಲಸ ತುಮುಲ್ ಮಾಡಲಿದೆ. ರಾಜ್ಯದಲ್ಲೇ ವಿಶೇಷ ಸ್ಥಾನಮಾನ ಪಡೆದ ನಮ್ಮ ಒಕ್ಕೂಟ ಸಾಮಾಜಿಕ ಸೇವಾ ಕಾರ್ಯದಲ್ಲೂ ಸೈ ಎನಿಸಿಕೊಳ್ಳಲಿದೆ ಎಂದರು.

ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಆರೋಗ್ಯ ಶಿಬಿರದ ಬಗ್ಗೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. ರಕ್ತದಾನ ಶಿಬಿರದಲ್ಲಿ ಯುವಕರು ರಕ್ತ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ.ಸುರೇಶ್, ವ್ಯವಸ್ಥಾಪಕ ಡಾ.ಟಿ.ಎಂ.ಪ್ರಸಾದ್, ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುದ್ದವೀರಯ್ಯ, ವಿಸ್ತರಣಾಧಿಕಾರಿಗಳಾದ ಮಂಜುನಾಥ, ಪುಷ್ಪಲತಾ, ಸಿದ್ದಲಿಂಗಸ್ವಾಮಿ, ಸಿದ್ದಗಂಗಾ ಆಸ್ಪತ್ರೆಯ ಪಿಆರ್ ಓ ಕಾಂತರಾಜ್, ಮುಖಂಡರಾದ ಬಸವರಾಜ್, ಚೇತನ್ ನಾಯಕ, ಕಾರ್ತಿಕ ಇತರರು ಇದ್ದರು.
ವರದಿ : ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!