ಕೆಲಸ ಬಿಟ್ಟು ಕಚೇರಿ ಅಲೆಯುತ್ತಿದ್ದ ರೈತರಿಗೆ ಸಹಕಾರಿಯಾದ ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್

ಕೆಲಸ ಬಿಟ್ಟು ಕಚೇರಿ ಅಲೆಯುತ್ತಿದ್ದ ರೈತರಿಗೆ ಸಹಕಾರಿಯಾದ ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್

ಗುಬ್ಬಿ: ಪ್ರತಿ ನಿತ್ಯ ಕೂಲಿ ಕೆಲಸ ಬಿಟ್ಟು ತಮ್ಮ ಕಾರ್ಯಕ್ಕೆ ದಾಖಲೆ ಹಿಡಿದು ಕಚೇರಿ ಅಲೆದು ಪರದಾಡುವ ರೈತರ ಸಂಕಷ್ಟ ಆಲಿಸಿದ ಬಿಜೆಪಿ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಹಳ್ಳಿಗಾಡಿನ ಜನರ ಮನೆ ಬಾಗಿಲಿಗೆ ಇಡೀ ಸರ್ಕಾರವೇ ಹೋಗಿ ಕೆಲಸ ಮಾಡುವ ಕಾರ್ಯ ಜನ ಮನ್ನಣೆಗಳಿಸಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹೊರಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದೇ ಸೂರಿನಲ್ಲಿ ಎಲ್ಲಾ ಇಲಾಖೆ ಒಗ್ಗೂಡಿಸಿ ಜನರ ಅಹವಾಲು ಸ್ವೀಕಾರ ಮಾಡಲಾಗುವುದು. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ ಎಂದು ತಿಳಿಸಿದರು.

ಹೇಮೆ ಹರಿಸುವ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದು ಎಲ್ಲಾ ಕೆರೆಗಳನ್ನು ತುಂಬಿಸಿದ್ದೇನೆ. ರಸ್ತೆ ವಿಚಾರದಲ್ಲಿ ಜನರಿಂದ ದೂರು ಬರುವ ಮುನ್ನ ಕೆಲಸ ಮಾಡಿ ಅಭಿವೃದ್ದಿಯ ಹೋಬಳಿ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು ಅಭಿವೃದ್ದಿ ಕೆಲಸ ಮಾಡಿದ ಕ್ಷೇತ್ರದಲ್ಲಿ ತುರುವೇಕೆರೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಗಳಿಸಿ ಜಿಲ್ಲೆಯಲ್ಲಿ ಮೊದಲ ಪಟ್ಟ ಉಳಿಸಿಕೊಂಡಿದೆ ಎಂದ ಅವರು ಬಗರ್ ಹುಕುಂ ಜಮೀನು ಮಂಜೂರು ಮಾಡಲು ಈಗಾಗಲೇ ಅರ್ಜಿ ಸಲ್ಲಿಸಿದವರು ಮರಳಿ ನಮೂನೆ 57 ಅನ್ ಲೈನ್ ಅರ್ಜಿ ಸಲ್ಲಿಸಿ. ಮುಂದಿನ ಮಾರ್ಚ್ ತಿಂಗಳವರೆಗೆ ಅವಕಾಶವಿದ್ದು ಕೂಡಲೇ ಅರ್ಜಿ ಸಲ್ಲಿಸಿ ಅರ್ಹರಿಗೆ ಯಾವುದೇ ಆತಂಕ ಬೇಕಿಲ್ಲ. ದಾಖಲೆ ಸಿಗಲಿದೆ. ನಮ್ಮಲ್ಲಿ ಭೂ ಹಗರಣ ಆಗಿಲ್ಲ. ಈ ನಿಟ್ಟಿನಲ್ಲಿ ಅರ್ಹರನ್ನು ಸ್ಥಳಕ್ಕೆ ತೆರಳಿ ಗುರುತಿಸಿ ಮಂಜೂರು ಮಾಡಲಾಗುವುದು ಎಂದರು.

ತುಂಬಿ ಹರಿದ ಹೇಮಾವತಿ ನೀರು ಮುಂದಿನ ಬೇಸಿಗೆ ಬೆಳೆ ತೆಗೆಯಲು ಅನುವು ಮಾಡಲಾಗುವುದು. ಅತ್ಯಮೂಲ್ಯ ನೀರು ಮಿತವಾಗಿ ಬಳಸಬೇಕಿದೆ. ರಾಗಿ ಬೆಳೆ ಈ ಬಾರಿ ಮಳೆಯ ಹೊಡೆತಕ್ಕೆ ಸಿಲುಕಿ ಹಾಳಾಗಿದೆ. ಈ ನಿಟ್ಟಿನಲ್ಲಿ 90 ದಿನದಲ್ಲಿ ಬೆಳೆಯುವ ಜಿ 9 ಹೊಸ ತಳಿ ರಾಗಿ ಉತ್ತಮ ಎನ್ನಲಾಗಿದೆ. ಅದನ್ನು ನಮ್ಮ ರೈತರಿಗೆ ಒದಗಿಸುವಂತೆ ಕೃಷಿ ಇಲಾಖೆ ಸೂಚಿಸಿದ ಅವರು ಹೊರಕೆರೆ ಗ್ರಾಮದಲ್ಲಿ ಒಂದು ಕೋಟಿ ರೂಗಳನ್ನು ಬಳಸಿ ಮನೆಗೆ ನಳ ಸಂಪರ್ಕ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಬಹಳ ಹಾಳಾಗಿದ್ದ ಇಲ್ಲಿನ ರಸ್ತೆ ಅಭಿವೃದ್ದಿ ಪಡಿಸಲಾಗುವುದು. ತಡವಾಗಿ ನನ್ನ ಗಮನಕ್ಕೆ ಬಂದ ಫೋರೆಡ್ ನೀರು ಬಳಕೆ ಬಗ್ಗೆ ತಿಳಿದು ಗಂಭೀರ ವಿಚಾರವನ್ನು ಕೂಡಲೇ ಸಂಬಂದಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಒಂದೇ ದಿನದಲ್ಲಿ ಶುದ್ದ ನೀರಿನ ಘಟಕಕ್ಕೆ 10 ಲಕ್ಷ ರೂಗಳನ್ನು ಮಂಜೂರು ಮಾಡಿಸಿ ಶೀಘ್ರದಲ್ಲಿ ಆರ್ ಓ ಘಟಕ ಆರಂಭವಾಗಲಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ ಸರ್ಕಾರದ ಈ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. 2021 ರಲ್ಲಿ ಕಾರ್ಯಕ್ರಮ ಆರಂಭಿಸಿ ತಿಂಗಳ ಮೂರನೇ ಶನಿವಾರ ಹೋಬಳಿಯ ಗಡಿ ಭಾಗದ ಗ್ರಾಮವನ್ನು ಆಯ್ಕೆ ಮಾಡಿ ನಡೆಸಲಾಗುವುದು. ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಒದಗಿಸುವ ಜೊತೆಗೆ ಇಲ್ಲಿ ಸಾಧ್ಯವಾಗದ ಸಮಸ್ಯೆಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದರು.

ಮುಖಂಡ ಮದುವೆಮನೆ ಕುಮಾರ್ ಮಾತನಾಡಿ ಹೋಬಳಿಯ ಜನರ ಗಮನ ಸೆಳೆದ ಈ ಕಾರ್ಯಕ್ರಮವನ್ನು ಜನರು ಬಳಸಿಕೊಳ್ಳಬೇಕು. ಗುಬ್ಬಿಗೆ ಅಲೆದು ಪರದಾಡುವ ರೈತರು ಈ ವೇದಿಕೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜೊತೆಗೆ ಇಲಾಖಾವಾರು ಯೋಜನೆ, ಅನುದಾನ ಇನ್ನಿತರ ಸೌಲಭ್ಯ ತಿಳಿದುಕೊಂಡು ಅರ್ಜಿ ಸಲ್ಲಿಸಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ, ಮಗುವಿಗೆ ಅನ್ನಪ್ರಾಶನ, ಪೌಷ್ಠಿಕ ಆಹಾರ ವಿತರಣೆ ಹಾಗೂ ಪಿಂಚಣಿ ವಿತರಣೆ, ಕನ್ನಡಕ ವಿತರಣೆ ಪವತಿಖಾತೆ, ನರೇಗಾ ಯೋಜನೆಯ ಪತ್ರ ವಿತರಣೆ ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಪಾಂಡುರಂಗಯ್ಯ, ಸದಸ್ಯರಾದ ಶ್ರೀಕಾಂತ್, ಹರಿಣಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೆಂಪರಾಜು, ತಾಪಂ ಇಓ ಶಿವಪ್ರಕಾಶ್, ಸಿಡಿಪಿಓ ಮಂಜುನಾಥ್, ಬಿಇಓ ಸೋಮಶೇಖರ್, ಉಪ ತಹಶೀಲ್ದಾರ್ ಮುತ್ತುರಾಜ್, ಕಂದಾಯ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!