ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳಕ್ಕೆ ಸಂಘಟಿತ ಹೋರಾಟವೇ ಕಾರಣ : ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಶ್ಲಾಘನೆ

ಗುಬ್ಬಿ: ಮೀಸಲಾತಿ ಹೆಚ್ಚಳಕ್ಕೆ ನಮ್ಮ ಹಕ್ಕು ಎಂದು ಆಗ್ರಹಿಸಿ ವಾಲ್ಮೀಕಿ ಸಮಾಜ ನಡೆಸಿದ ಹೋರಾಟಕ್ಕೆ ಬಿಜೆಪಿ ಸರ್ಕಾರ ಗೌರವ ನೀಡಿ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ತಿಳಿಸಿದರು.

ತಾಲ್ಲೂಕಿನ ಕಡಬ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ನಗರ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಅತ್ತರೆ ಹಾಲು ಕೊಡುವ ರೀತಿ ಶ್ರೀ ಪ್ರಸನ್ನಾಂದ ಸ್ವಾಮೀಜಿಗಳ ಹೋರಾಟಕ್ಕೆ ಸಂದ ಗೌರವ ಇದಾಗಿದೆ. ಬಿಜೆಪಿ ಸರ್ಕಾರ ಸಹ ಕಳೆದ 30 ವರ್ಷದ ಈ ಹೋರಾಟಕ್ಕೆ ಸೋತು ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ ಎಂದರು.

ಗಣ್ಯರ ಜಯಂತಿ ಮಹತ್ವ ಜನರು ತಿಳಿಯಬೇಕಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸರ್ಕಾರ ಗಣ್ಯರ ಜಯಂತಿಗೆ ಪ್ರಾಧಾನ್ಯತೆ ನೀಡಿದೆ. ಆದರೆ ಅದು ಯಶ ಕಾಣುತ್ತಿಲ್ಲ. ಜನರು ಜಾತಿಗೆ ಸೀಮಿತ ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಜನರಲ್ಲಿ ಮೊದಲು ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದ ಅವರು ಆಯಾ ಸಮಾಜ ಕಾರ್ಯಕ್ರಮ ಮೂಲಕವಾದರೂ ಮುಖ್ಯವಾಹಿನಿಗೆ ಬರಲಿ ಎಂದು ಆಶಿಸಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದುಳಿದ ವರ್ಗ ಬಳಸಿಕೊಳ್ಳುವವರು ಜಾಸ್ತಿ. ಜಾತಿಗಳ ಮಧ್ಯೆ ಕಂದಕ ಸೃಷ್ಠಿಸುವ ಮಂದಿಯಿಂದ ದೂರವಿರಿ. ರಾಜಕೀಯ ಶಕ್ತಿ ನೀಡಲು ಮೀಸಲಾತಿ ಅಸ್ತ್ರವನ್ನು ಮಾಜಿ ಪ್ರಧಾನಿಗಳು ದೇವೇಗೌಡರ ಕೊಡುಗೆಯಾಗಿ ನೀಡಿದ್ದರ ಫಲ ಇಂದು ಅಹಿಂದ ಮುಖಂಡರು ಅಧಿಕಾರ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಾತಿ ಅನ್ನುವುದು ಸಂಘಟನೆಗೆ ಬಳಸಿ ಅದರಲ್ಲೇ ನ್ಯಾಯಯುತ ಹೋರಾಟ ಮಾಡಿ ಎಂದು ಕರೆ ನೀಡಿದರು.

ಹಿಂದುಳಿದ ವರ್ಗಗಳ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ ನಮ್ಮ ಸಮಾಜಕ್ಕೆ ಪವಿತ್ರ ಗ್ರಂಥ ರಾಮಾಯಣ ನೀಡಿದ ವಾಲ್ಮೀಕಿ ಮಹರ್ಷಿಗಳ ಆದರ್ಶ ನಾವುಗಳು ಅಳವಡಿಸಿಕೊಳ್ಳಿ. ಸಂವಿಧಾನ ಹಕ್ಕು ಮೀಸಲಾತಿ ಕೇಳಿ ಪಡೆದಿದ್ದೀರಿ. ಪರಿಶಿಷ್ಟ ಪಂಗಡಕ್ಕೆ ಶೇಕಡಾ 3.5 ರಿಂದ 7.5 ಹೆಚ್ಚಳ ಸ್ವಾಗತಾರ್ಹ. ಈ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯ ಸೌಭಾಗ್ಯಮ್ಮ ಮಾತನಾಡಿ ವಾಲ್ಮೀಕಿ ಸಮಾಜದವರು ಮುಖ್ಯವಾಹಿನಿಗೆ ಬರಲು ಅವಶ್ಯ ಮೀಸಲಾತಿಯನ್ನು ಮಹಿಳೆಯರು ಗಟ್ಟಿ ದನಿಯಲ್ಲಿ ಆಗ್ರಹಿಸಿದ್ದರು. ಬೆಂಗಳೂರಿನ ಹೋರಾಟಕ್ಕೆ ಮೊದಲು ಮಹಿಳಾ ದನಿ ಮಾರಶೆಟ್ಟಿ ಹಳ್ಳಿ ಮಹಿಳೆಯರು ಕೂಗಿದ್ದರು ಎಂದು ಮಹಿಳೆಯರ ಸಂಘಟನೆ ಬಗ್ಗೆ ಶ್ಲಾಘಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಗ್ರಾಮದ ವಾಲ್ಮೀಕಿ ಸಮುದಾಯದ ಬಡಾವಣೆಗೆ ವಾಲ್ಮೀಕಿ ನಗರ ಎಂಬ ನಾಮಫಲಕವನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘ, ನಾಯಕ ಮಹಿಳಾ ಸ್ವಸಹಾಯ ಸಂಘ ಹಾಗೂ ವಾಲ್ಮೀಕಿ ಯುವಕರ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಗ್ರಾಪಂ ಅಧ್ಯಕ್ಷ ಸಿದ್ದರಾಮೇಗೌಡ, ಮದಕರಿ ಸೇನೆ ರಾಜ್ಯಾಧ್ಯಕ್ಷ ಪ್ರತಾಪ್, ಮುಖಂಡರಾದ ಪುರುಷೋತ್ತಮ್, ರಾಮಚಂದ್ರಪ್ಪ, ಹೇರೂರು ನಾಗರಾಜು, ನಯನ, ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಸ್ವಸಹಾಯ ಸಂಘದ ಗಂಗಮ್ಮ, ಮಂಜುನಾಥ್, ಖಜಾಂಚಿ ರಾಜಕುಮಾರ್,ಸದಸ್ಯ ನಟರಾಜು ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!