ಗುಬ್ಬಿ: ಕೊಟ್ಟ ಮಾತಿನಂತೆ ನಡೆದುಕೊಂಡು ರೈತರ ಸಾಲವನ್ನು ಮನ್ನಾ ಮಾಡಿದ ಮಾಜಿ ಸಿಎಂ ಕುಮಾರಣ್ಣ ಈ ಬಾರಿ ಸ್ವಸಹಾಯ ಸಂಘದ ಮಹಿಳೆಯರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಿರುವುದು ಅವರ ಬಡವರ ಕಾಳಜಿ ಬಿಂಬಿಸುತ್ತದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಜೆಡಿಎಸ್ ಪ್ರಣಾಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಜೆಡಿಎಸ್ ಕಚೇರಿ ಬಳಿ ಪಂಚರತ್ನ ಯೋಜನೆ ಕುರಿತ ಜೆಡಿಎಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರಾದೇಶಿಕ ಪಕ್ಷ ಜೆಡಿಎಸ್ ಸಿಕ್ಕ ಎಲ್ಲಾ ಆಡಳಿತ ಅವಕಾಶವನ್ನು ಬಡವರು, ದೀನ ದಲಿತರು ಹಾಗೂ ರೈತ ವರ್ಗ ಪರ ಕೆಲಸ ಮಾಡಿ ಇಂದಿಗೂ ಜನಪರ ಯೋಜನೆಗಳು ಮೆಚ್ಚುಗೆಗೆ ಪಾತ್ರವಾಗಿದೆ. ಪಂಚರತ್ನ ಯೋಜನೆಯ ಅಂಶ ರಾಜ್ಯದಲ್ಲೇ ಉತ್ತಮ ಪ್ರಣಾಳಿಕೆ ಎನಿಸಿದೆ ಎಂದರು.
ರೈತರ ಸಾಲ ಮನ್ನಾ ಕೊಟ್ಟ ಮಾತಿನಂತೆ 26 ಸಾವಿರ ಕೋಟಿ ಮನ್ನಾ ಮಾಡಿ ರೈತರ ಬಗ್ಗೆ ಕಾಳಜಿ ತೋರಿದ್ದ ಕುಮಾರಣ್ಣ ಅವರ ಪರಿಕಲ್ಪನೆ ಈ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಕರೆ ತರಲಿದೆ ಎಂದ ಅವರು ಕೋವಿಡ್ ಸಂದರ್ಭದಲ್ಲಿ ಮಹಿಳೆಯರು ಅನುಭವಿಸಿದ ಕಷ್ಟ ಹೇಳತೀರದು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಅವರ ಬದುಕಿಗೆ ಕೋವಿಡ್ ಸಮಯದಲ್ಲಿ ಸಾಲ ತೀರಿಸುವ ಪ್ರಯತ್ನದಲ್ಲಿ ಸೋತು ಸುಣ್ಣವಾಗಿದ್ದರು. ಬಡ ಮಹಿಳೆಯರ ಪಾಡು ಅರಿತ ಕುಮಾರಣ್ಣ ಸ್ವಸಹಾಯ ಸಂಘದ ಮಹಿಳೆಯರ ಸಾಲ ಮನ್ನಾ ಆಲೋಚನೆ ಮಾಡಿರುವುದು ಸ್ವಾಗತಾರ್ಹ ಎಂದರು.
ಪಂಚರತ್ನ ಯೋಜನೆಯ ಕುರಿತ ಜನ ಜಾಗೃತಿ ಕೆಲಸಕ್ಕೆ ಈಗಾಗಲೇ ಗುಬ್ಬಿ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ. ಗಡಿ ಭಾಗದ ಕುಗ್ರಾಮಗಳು, ಯಾದವ ಸಮುದಾಯದ ಸಣ್ಣ ಹಟ್ಟಿಗಳು ಹೀಗೆ ಎಲ್ಲಾ ಗ್ರಾಮದಲ್ಲೂ ಪಂಚರತ್ನ ಯೋಜನೆ ಮತ್ತು ಜೆಡಿಎಸ್ ಆಳ್ವಿಕೆ ಬಗ್ಗೆ ತಿಳಿಸಲಾಗುತ್ತಿದೆ. ಜೊತೆಗೆ ಎಲ್ಲಾ ಯುವ ಕಾರ್ಯಕರ್ತರ ಪಡೆ ಹುಮ್ಮಸ್ಸಿನಲ್ಲಿ ಓಡಾಟ ನಡೆಸಿವೆ. ಸಂಘಟನೆಗೆ ಒತ್ತು ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಸಭೆ ಮೂಲಕ ಮಾಡಲಾಗುತ್ತಿದೆ. ಡಿಸೆಂಬರ್ ಮಾಹೆಯಲ್ಲಿ ಕುಮಾರಣ್ಣ ವಾಸ್ತವ್ಯ ಹೂಡುವ ಹಿನ್ನಲೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಉಮೇಶ್ ಮತ್ತು ನಾಗರಾಜು ಸಂಘಟನೆಯ ಬಗ್ಗೆ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾಲಿಂಗಯ್ಯ, ಕೃಷ್ಣಪ್ಪ, ಈರಣ್ಣ, ಮಂಜುನಾಥ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.