ನರೇಗಾ ಯೋಜನೆಯ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿಗೆ ಜಾಥಾ ಕಾರ್ಯಕ್ರಮ : ತಾಪಂ ಇಓ ಶಿವಪ್ರಕಾಶ್

ಗುಬ್ಬಿ: ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ 2023-24 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನ ಆರಂಭಿಸಲಾಗಿದೆ ಎಂದು ತಾಪಂ ಇಓ ಶಿವಪ್ರಕಾಶ್ ತಿಳಿಸಿದರು.

ಗುಬ್ಬಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಂದು ತಿಂಗಳ ಅವಧಿಗೆ ಮನೆ ಮನೆ ಜಾಥಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಮಹಾತ್ಮಗಾಂಧಿ ನರೇಗಾ ಯೋಜನೆ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು ಹಾಗೂ ಕೆಲಸದ ಬೇಡಿಕೆ ಸಂಗ್ರಹಿಸಲಾಗುವುದು ಎಂದರು.

ಮುಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯವ್ಯಯ ತಯಾರಿಕೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. 2023 ಫೆಬ್ರವರಿ 20 ರಂದು ಅಂತಿಮಗೊಳಿಸಲು ವೇಳಾಪಟ್ಟಿ ಹಾಕಿಕೊಳ್ಳಲಾಗಿದೆ ಎಂದ ಅವರು ಈ ಕಾರ್ಯಕ್ರಮದ ಅಡಿಯಲ್ಲಿ ನರೇಗಾ ಯೋಜನೆಯಡಿ ದೊರೆಯುವ ಕೂಲಿ ಮೊತ್ತದ ಬಗ್ಗೆ ಮಾಹಿತಿ, ಗಂಡು, ಹೆಣ್ಣಿಗೆ ಸಮಾನ ಕೂಲಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ 50% ರಷ್ಟು ರಿಯಾಯಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿಸಲಾಗುತ್ತದೆ ಎಂದರು.

“ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ “ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿಗಳು ಗ್ರಾಮ ಕಾಯಕ ಮಿತ್ರ, ಮೇಟ್, ಬಿ.ಎಫ್.ಟಿ ರವರನ್ನು ಒಳಗೊಂಡು ಹಾಗೂ ಅನುಷ್ಟಾನ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸುತ್ತಾರೆ. ವಾರ್ಡ್ ಗಳ ಪ್ರತಿ ಮನೆ ಮನೆಗೂ ಭೇಟಿ ನೀಡಿ ಯೋಜನೆಯ ಹಾಗೂ ಇತರೆ ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

ನರೇಗಾದಲ್ಲಿ ಜಲ ಸಂಜೀವಿನಿ ಜಲಾನಯನ ಕಾರ್ಯಕ್ರಮಗಳ ಅನುಷ್ಟಾನ, ಅಂತರ್ಜಲ ಮಟ್ಟಗಳ ವರ್ಧನೆಯ ಕಾರ್ಯಕ್ರಮಗಳ ಅನುಷ್ಟಾನ, ದಿಬ್ಬದಿಂದ ಕಣಿವೆ, ಜಲಾನಯನ ಪ್ರದೇಶ ಗುರುತಿಸುವುದು, ಜಲ ಭದ್ರತಾ ಯೋಜನೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅಗತ್ಯತೆ ಗುರುತಿಸುವುದು, ಜಿಐಎಸ್ ಆಧಾರಿತ ವೈಜ್ಞಾನಿಕ ಯೋಜನೆ ತಯಾರಿಕೆ, ಗೋಮಾಳ ಅಭಿವೃದ್ದಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯೀಕರಣ, ಸುಸ್ಥಿರ ಜೀವನೋಪಾಯ ಕಾಮಗಾರಿಗಳಿಗೆ ಆದ್ಯತೆ ನೀಡಲು ಕ್ರಮ ವಹಿಸುವುದು, ವಾರ್ಡ್ ಸಭೆ, ಗ್ರಾಮ ಸಭೆ, ರೈತರಿಂದ ರೈತರಿಗಾಗಿ ಅಭಿಯಾನ ಇನ್ನು ಅನೇಕ ಕಾಮಗಾರಿಗಳ ಕುರಿತು ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!