.
ಗುಬ್ಬಿ: ಇತಿಹಾಸ ಪ್ರಸಿದ್ದ ಗುಬ್ಬಿ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಹಾಗೂ ಪಾರ್ವತಮ್ಮ ಸಮೇತ ಅಮರಗೊಂಡ ಶ್ರೀ ಮಲ್ಲಿಕಾರ್ಜನಸ್ವಾಮಿ ಅವರ ಹೂವಿನ ವಾಹನ ಇಡೀ ರಾತ್ರಿ ಅದ್ದೂರಿಯಾಗಿ ಜರುಗಿ, ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಪುಷ್ಪಾಲಂಕಾರ ರಥಗಳು ಕಂಡು ಕಣ್ಮನ ತುಂಬಿಕೊಂಡರು.
ಕಾರ್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ನಡೆಯುವ ಈ ಹೂವಿನ ವಾಹನ ಪ್ರಸಿದ್ದಿಯಾಗಿದ್ದು ಮಳೆಯ ನಡುವೆಯೂ ರಾಜ್ಯದೆಲ್ಲೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ದೇವಾಲಯದ ಬಳಿ ಸಿದ್ಧಗೊಳ್ಳುವ ಪುಷ್ಪದ ರಥವನ್ನು ನೋಡುವುದಕ್ಕೆ ಭಕ್ತರು ಬರುತ್ತಾರೆ. ಈ ಜೊತೆಗೆ ಹೂವಿನ ವಾಹನ ಸಂಚರಿಸುವ ರಾಜ ಬೀದಿಯಲ್ಲಿನ ನಿವಾಸಿಗಳು ತಮ್ಮ ಮನೆಗಳ ಮುಂದೆ ಬಾಳೆಕಂದುಗಳನ್ನು ಹೂವುಗಳಿಂದ ಅಲಂಕರಿಸಿ ಭಕ್ತ ವೃಂದ ಸ್ವಾಮಿಯವರ ಆಹ್ವಾನಕ್ಕೆ
ಸಜ್ಜಾಗಿರುತ್ತಾರೆ. ಭಕ್ತರ ಮನೆ ಹಾಗೂ ಅಂಗಡಿ ಮುಂದೆ ಬರುವ ವಾಹನಕ್ಕೆ ಅಂಬು ಹಾಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಅಲಂಕಾರದ ಬಾಳೆಗಿಡ ಅಂಬು ನೋಡುವುದೇ ಒಂದು ಆನಂದ. ಬಾಳೆಕಾಯಿ ಬಿಟ್ಟ ಗಿಡವನ್ನು ತಮ್ಮ ಮನೆ ಅಂಗಡಿ ಮುಂದೆ ನೆಟ್ಟು ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಹೂವು ಮತ್ತು ವಿದ್ಯುದ್ದೀಪಾಲಂಕಾರದ ಜೊತೆಗೆ ಕರ್ಪೂರ ದೀಪಗಳನ್ನು ಹಚ್ಚಿ ವಾಹನ ಬರುವಿಕೆಯನ್ನು ಕಾಯುವ ಭಕ್ತರು. ಒಂದಕ್ಕಿಂತ ಒಂದು ಭಿನ್ನವಾಗಿ ಕಾಣುವ ಅಂಬುಗಳ ಫೋಟೋಗಳು ಭಕ್ತರ ಮೊಬೈಲ್ ಗ್ಯಾಲರಿಯಲ್ಲಿ ಪೋಟೋ ವಿಡಿಯೋ ಆಗಿ ಸೇರುತ್ತವೆ.
ರಾತ್ರಿ 11 ರ ನಂತರ ದೇವಾಲಯದಿಂದ ಹೊರಡುವ ಎರಡು ಪುಷ್ಪ ರಥಗಳು ವಾದ್ಯಗೋಷ್ಠಿ, ಅನೇಕ ಕಲಾ ಪ್ರಕಾರ ತಂಡದೊಂದಿಗೆ ಹೊರಡುವ ಮೆರವಣಿಗೆ ಮಾರ್ಗ ಮಧ್ಯೆ ಭಕ್ತರ ಪೂಜೆ ಪಡೆದು ಮುಂದೆ ಸಾಗುತ್ತದೆ. ಮುಂಜಾನೆ ವೇಳೆಗೆ ಪಟ್ಟಣದ ಬಂಗ್ಲೋ ಮಠದ ಬಳಿ ವಿರಾಜಮಾನವಾಗಲಿದೆ. ನಂತರ ಬೆಳಿಗ್ಗೆ ಸ್ವಾಮಿಯವರನ್ನು ಪಲ್ಲಕ್ಕಿಯಲ್ಲಿ ಧೂಳ್ ಮೆರವಣಿಗೆ ಮೂಲಕ ಭಕ್ತರ ಮನೆಗಳಿಗೆ ಬೇಟಿ ನೋಡಿ ಸಂಜೆಯವರೆಗೆ ಪೂಜೆ ಕೈಂಕರ್ಯ ನಡೆದು ಸಂಜೆ ಚಿಕ್ಕ ಗುಬ್ಬಿಯಪ್ಪ ದೇವಾಲಯ ತಲುಪಿ ಹೂವಿನ ವಾಹನ ಜಾತ್ರೆ ಸಂಪನ್ನಗೊಂಡಿತು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.