ಬೆಂಗಳೂರು/ ದೆಹಲಿ: ಕರ್ನಾಟಕ ಹೈಕೋರ್ಟ್ ನೀಡಿದ ನೋಟಿಸ್ ಪ್ರಶ್ನಿಸಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ , ಡಿ.ಸಿ.ವೇಣುಗೋಪಾಲ್, ಚುನಾವಣಾ ಏಜೆಂಟ್ ಪಾಲನೇತ್ರ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
ನಕಲಿ ಬಾಂಡ್, ಹಣ ಹಂಚಿ ಚುನಾವಣೆಯಲ್ಲಿ ಗೌರಿಶಂಕರ್ ಅವರು ಗೆಲುವು ಸಾಧಿಸಿದ್ದು ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಕೋರಿ ಮಾಜಿ ಶಾಸಕ ಬಿ.ಸುರೇಶಗೌಡ ಕರ್ನಾಟಕ ಹೈ ಕೋರ್ಟ್ ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆಯನ್ನು ಮುಗಿಸಿರುವ ಹೈಕೋರ್ಟ್ ಕಮ್ಮನಹಳ್ಳಿ ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಡಿ.ಸಿ.ವೇಣುಗೋಪಾಲ್, ಗೌರಿಶಂಕರ್ ಅವರಿಗೆ ಚುನಾವಣಾ ಏಜೆಂಟ್ ಆಗಿದ್ದ ಪಾಲನೇತ್ರ ಅವರಿಗೆ ಅವರ ಆರೋಪದ ಕುರಿತು ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿಗೊಳಿಸಿ ಆದೇಶಿಸಿತ್ತು.
ಕೋರ್ಟ್ ಆದೇಶದಲ್ಲಿ ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಸರಿಯಾದ ಕಾರಣ ನೀಡಿಲ್ಲ. ಹೀಗಾಗಿ ಹೈಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ಇವರಿಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಹಿರಿಯ ವಕೀಲರಾದ ಬಸವಪ್ರಭು ಪಾಟೀಲ್ ವಾದಿಗಳ ಪರ ವಾದಿಸಿದ್ದರು.
ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ಹೈಕೋರ್ಟ್ ಆದೇಶಕ್ಕೆ ಮೆಚ್ಚುಗೆ ಸೂಚಿಸಿತು. ಕಾರಣಗಳನ್ನು ಆದೇಶದಲ್ಲಿ ವಿವರಿಸಲಾಗಿದೆ. ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ಯಾವುದೇ ಸಕಾರಣ ಇಲ್ಲ. ಅರ್ಜಿ ವಜಾಗೊಳಿಸುವುದಾಗಿ ಹೇಳಿತು.
ಇದಾದ ನಂತರ, ಮೇಲ್ಮನವಿದಾರರ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಹೇಳಿ ಹಿಂಪಡೆದರು.
ಕರ್ನಾಟಕ ಹೈಕೋರ್ಟ್ ನಲ್ಲಿ ಇವರಿಬ್ಬರ ವಿಚಾರಣೆ ನ.25ರಂದು ನಡೆಯಲಿದೆ.