ಸಂವಿಧಾನ ತಿದ್ದುವ ಮೂಲಕ ಸ್ವಾತಂತ್ರ ಸಮತೆ ಭ್ರಾತೃತ್ವಕ್ಕೆ ದಕ್ಕೆ ತರಲು ಮುಂದಾದ ಬಿಜೆಪಿ : ಜಿ.ಎಸ್.ಪ್ರಸನ್ನಕುಮಾರ್ ಖಂಡನೆ

ಗುಬ್ಬಿ: ಸಂವಿಧಾನ ಸಮರ್ಪಿಸಿಕೊಂಡ ದಿನವನ್ನು ಆಚರಿಸುವ ಬದಲು ಸಂವಿಧಾನ ಆಶಯಕ್ಕೆ ದಕ್ಕೆ ತರುವ ತಿದ್ದುಪಡಿ ಮಂಡನೆಗೆ ಮುಂದಾದ ಬಿಜೆಪಿ ಸರ್ಕಾರದ ನಿಲುವು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಟೀಕಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ಜಾರಿಗೆ ಮುನ್ನ ನಡೆದ ಚರ್ಚೆ, ಪ್ರಸ್ತಾವನೆಯನ್ನು ಉಲ್ಲೇಖಿಸದ ಬಿಜೆಪಿ ಪ್ರಸ್ತುತ ವಿದ್ಯಮಾನ ಬಿಟ್ಟು ಎರಡು ಸಾವಿರ ವರ್ಷಗಳ ಹಿಂದಿನ ಅಲಿಖಿತ ಅಂಶವನ್ನು ಮುಂದಿಟ್ಟು ಜಾತಿಗಳ ನಡುವೆ ಘರ್ಷಣೆಗೆ ಮುಂದಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ಸಂವಿಧಾನ ಶಾಸನಕ್ಕೆ ವಿರೋಧವಾಗಿ ಹೊರಟ ಬಿಜೆಪಿ ಸರ್ಕಾರ ಸಂವಿಧಾನದ ಅಡಿಪಾಯವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಕೇವಲ ಒಂದು ಧರ್ಮಕ್ಕೆ ಸೀಮಿತ ನಿಲುವು ಅಸಹಿಷ್ಣುತೆಗೆ ಮೂಲ ಎಂಬುದು ತಿಳಿದೂ ಸಹ ಅಧಿಕಾರಕ್ಕೆ ಎಲ್ಲವನ್ನೂ ತಿದ್ದುವ ಮೂಲಕ ಪ್ರಜಾಪ್ರಭುತ್ವಕ್ಕೆ ದಕ್ಕೆ ತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಪ್ರತಿ ಮನೆ ಪ್ರತಿ ಮನಕ್ಕೆ ತಲುಪಿಸುವ ಕರಪತ್ರವನ್ನು ಇದೇ ತಿಂಗಳ 26 ರಂದು ಸಂವಿಧಾನ ಅರ್ಪಿಸಿಕೊಂಡ ದಿನವಾಗಿ ಆಚರಿಸುತ್ತಾ ಸಂವಿಧಾನ ಉಳಿದರೆ ಭಾರತ ಉಳಿಯುತ್ತದೆ ಎಂದು ಜಾಗೃತಿ ಅಭಿಯಾನ ಆರಂಭಿಸಲಾಗುವುದು ಎಂದ ಅವರು ಕ್ಷೇತ್ರದ ಪ್ರತಿ ಮನೆಗೆ ತಲುಪಿಸಲು ಸಂವಿಧಾನ ಹಿತಾಸಕ್ತಿಗಳ ಕುರಿತ ಕರಪತ್ರವನ್ನು ಹಂಚುವ ಕಾರ್ಯಕ್ಕೆ ಚಾಲನೆ ನೀಡಿ ರಾಜ್ಯದಲ್ಲೇ ವಿನೂತನ ಕಾರ್ಯಕ್ರಮಕ್ಕೆ ನಾಂದಿ ಹಾಡಲಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಸಂವಿಧಾನ ಬದಲು ಮಾಡಲು ಮುಂದಾದ ಬಿಜೆಪಿ ಅಂಬೇಡ್ಕರ್ ಮತ್ತು ಗಾಂಧೀಜಿ ಅವರೇ ಸರಿಯಿಲ್ಲ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ. ಅಧಿಕಾರದ ಆಸೆಗೆ ಸಲ್ಲದ ವಾಮ ಮಾರ್ಗ ಅನುಸರಿಸುವ ಬಿಜೆಪಿ ಇಡೀ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ದಕ್ಕೆ ತರಲು ಮುಂದಾಗಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ತಿಳಿಯದ ಇಂತಹ ಗಂಭೀರ ವಿಚಾರ ಜಾಗೃತಿ ಅಭಿಯಾನ ಮೂಲಕ ತಿಳಿಯಬೇಕಿದೆ. ಅಧಿಕಾರ ಕಳೆದುಕೊಳ್ಳುವ ಭೀತಿ ಮನೆ ಮಾಡಿರುವ ಹಿನ್ನಲೆ ಇಲ್ಲಸಲ್ಲದ ಸರ್ಕಸ್ ಮಾಡುತ್ತಾ ಬಿಜೆಪಿ ದುರಾಡಳಿತ ಬಗ್ಗೆ ಮತದಾರರಿಗೆ ತಿಳಿಸುವ ನಿಟ್ಟಿನಲ್ಲಿ ಈ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಯಕರ್ತರು ಪಾಲ್ಗೊಂಡು ಕಾಂಗ್ರೆಸ್ ಹೊಸ ಹೆಜ್ಜೆಗೆ ಶಕ್ತಿ ತುಂಬುವಂತೆ ಕರೆ ನೀಡಿದರು.

ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ ಬಿಜೆಪಿ ಧೋರಣೆ ಹಾಗೂ ಅಧಿಕಾರಕ್ಕೆ ಸಂವಿಧಾನಕ್ಕೆ ದಕ್ಕೆ ತರುವ ಕೆಲಸ ಮಾಡಲು ಮುಂದಾದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ಇದೇ ತಿಂಗಳ 26 ರಂದು ಗುಬ್ಬಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ. ಕ್ಷೇತ್ರದ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಮುಂಚೂಣಿ ಘಟಕದ ಪದಾಧಿಕಾರಿಗಳು ಭಾಗಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಆರ್.ತಾತಯ್ಯ, ಟಿ.ಆರ್.ಚಿಕ್ಕರಂಗಯ್ಯ, ಎಂ.ವಿ.ಶ್ರೀನಿವಾಸ್, ಶಶಿಕಿರಣ್, ಕಡಬ ಶಿವಕುಮಾರ್, ಜಿ.ವಿ.ಮಂಜುನಾಥ್, ಶಿವಾನಂದ್, ಶಂಕರ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!