ಗುಬ್ಬಿ: ಸುದೀರ್ಘ ಅವಧಿ ಕುಟುಂಬವನ್ನೇ ತೊರೆದು ದೇಶದ ಗಡಿಯಲ್ಲಿ ನಮ್ಮನ್ನೆಲ್ಲಾ ಕಾಯುವ ಪವಿತ್ರ ವೃತ್ತಿಯ ಸೈನಿಕ ನಿವೃತ್ತಿ ನಂತರ ಅವರಿಗೆ ಕನಿಷ್ಠ ಗೌರವವನ್ನು ಸರ್ಕಾರ ನೀಡಬೇಕು. ಜಮೀನು, ನಿವೇಶನ ನೀಡುವ ಉದ್ದುದ್ದ ಭಾಷಣ ಮಾಡುವ ರಾಜಕಾರಣಿಗಳು ವಾಸ್ತವದಲ್ಲಿ ಒಂದಿಂಚು ಜಾಗ ನೀಡಲು ಆಗಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನಲ್ಲೂ ನಿವೃತ್ತ ಯೋಧರು ಅರ್ಜಿ ಸಲ್ಲಿಸಿದ್ದಾರೆ. ಯಾರಿಗೂ ಒಂದು ಗುಂಟೆ ಜಾಗ ನೀಡಲಾಗಿಲ್ಲ. ಈಗಾಗಲೇ ನೂರಾರು ಎಕರೆ ಜಮೀನು ಲಪಟಾಯಿಸಿದ ಭೂಗಳ್ಳರ ಮಧ್ಯೆ ನಿಜವಾದ ಅರ್ಹ ಸೈನಿಕರಿಗೆ ಜಮೀನು ನೀಡಲಾಗಿಲ್ಲ ಎಂದು ವಿಷಾದಿಸಿದರು.
ಸಮಾಜದಲ್ಲಿ ಅತ್ಯಗತ್ಯವಾಗಿ ಇರಬೇಕಾದ ಸಂಘ 75 ವರ್ಷದ ನಂತರ ತಲೆ ಎತ್ತಿದೆ. ದೇಶದ ಎರಡು ಕಣ್ಣು ಎನ್ನುವ ಯೋಧ ಮತ್ತು ರೈತರಿಗೆ ನಾವುಗಳು ಸರಿಯಾಗಿ ನಡೆಸಿಕೊಂಡಿಲ್ಲ. ತಮ್ಮ ಹಕ್ಕಿಗೆ ರೈತರು ಒಂದು ನಿರಂತರ ಹೋರಾಟ ಮಾಡಿತ್ತು. ಅವರಿಗೆ ಸರ್ಕಾರ ಸ್ಪಂದಿಸಲಿಲ್ಲ. ಸಂದಿಗ್ಧ ಸ್ಥಿತಿಯಲ್ಲಿ ಕೆಲಸ ಮಾಡುವ ಸೈನಿಕರು ನಿವೃತ್ತರಾದ ಬಳಿಕ ಅವರನ್ನು ಅಗೌರವವಾಗಿಯೇ ನಡೆಸಿಕೊಳ್ಳುತ್ತೇವೆ ಎಂದ ಅವರು ನಕಲಿ ಖಾತೆ ಸೃಷ್ಠಿಸಿ ಭೂ ಕಳ್ಳತನ ನಡೆದ ನೂರಾರು ಎಕರೆ ಪ್ರದೇಶವನ್ನು ಮಾಜಿ ಯೋಧರಿಗೆ ನೀಡಲು ಅವಕಾಶ ಸಿಗುವಂತೆ ಮಾಡುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಟ್ಟದಹಳ್ಳಿ ಗವಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಪ್ರಸ್ತುತ ದೇಶವನ್ನು ಅವಲೋಕಿಸಿದರೆ ಎಲ್ಲಾ ರಂಗದಲ್ಲೂ ಸಮಸ್ಯೆ ತಲೆದೋರಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತ, ಹದಗೆಟ್ಟ ಶಿಕ್ಷಣ ಕ್ಷೇತ್ರ ಹೀಗೆ ನಾನಾ ಸಮಸ್ಯೆಯ ಮಧ್ಯೆ ದೇಶ ಕಾಯುವ ಸೈನಿಕರ ಕುಟುಂಬ ಬಗ್ಗೆ ಕೇಳುವವರಿಲ್ಲ. 20 ವರ್ಷಕ್ಕೂ ಅಧಿಕ ಕುಟುಂಬದಿಂದ ದೂರವಿದ್ದು ಬರೀ ನೋವಿನಲ್ಲೇ ಸೇವೆ ಸಲ್ಲಿಸುವ ಸೈನಿಕರನ್ನು ನಿವೃತ್ತಿ ಬಳಿಕ ಮತ್ತೇ ನೋವು ಕೊಡುವ ಕೆಲಸ ಮಾಡಬಾರದು. ಗಡಿ ಭಾಗ ನೋಡಿದ ಯೋಧರು ಆಂತರಿಕ ಸಮಸ್ಯೆಯನ್ನು ಗನ್ ಹಿಡಿದು ಬಗೆಹರಿಸಿಕೊಳ್ಳುವ ದುಸ್ಥಿತಿ ಎದುರಾಗಬಹುದು ಎಂದು ವಿಷಾದಿಸಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಮಾತನಾಡಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಅದ್ಬುತವಾಗಿ ಹೇಳುವ ಸರ್ಕಾರ ನಿವೃತ್ತಿ ನಂತರ ನಮ್ಮನ್ನು ಕಡೆಗಣಿಸುವುದು ಸರಿಯಲ್ಲ. ಕಳೆದ 35 ವರ್ಷದಿಂದ ನಿವೃತ್ತ ಯೋಧರಿಗೆ ಯಾವುದೇ ಜಮೀನು ನಿವೇಶನ ನೀಡಿಲ್ಲ. ಆರೋಗ್ಯ ಕಾರ್ಡ್ ಯಾವ ಸೌಲಭ್ಯ ಒದಗಿಸಿಲ್ಲ. ಈ ಜೊತೆಗೆ ನಿವೃತ್ತಿ ನಂತರ ಕೊಡುವ ಸರ್ಕಾರಿ ಹುದ್ದೆಯನ್ನು ಪರ ರಾಜ್ಯದ ಯೋಧರು ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆ ಅತ್ಯಗತ್ಯವಿದೆ. ಎಲ್ಲಾ ತಾಲ್ಲೂಕು ಘಟಕ ಆರಂಭಿಸಿ ನಮ್ಮ ಹಕ್ಕು ಹೋರಾಟ ಮೂಲಕ ಪ್ರತಿಪಾದಿಸುತ್ತೇವೆ. ನಮಗೆ ಕಚೇರಿ ವ್ಯವಸ್ಥೆ ಮಾಡಿಕೊಟ್ಟರೆ ಯುವಕರಿಗೆ ಸೈನ್ಯದ ಮಾಹಿತಿ, ತರಬೇತಿ ನೀಡುವ ಕೆಲಸ ಮಾಡುತ್ತೇವೆ ಎಂದು ಮನವಿ ಮಾಡಿದರು.
ನಂತರ ಹಿರಿಯ ನಿವೃತ್ತ ಯೋಧರು ಹಾಗೂ ಮೃತಪಟ್ಟ ಯೋಧರ ಕುಟುಂಬಕ್ಕೆ ಸನ್ಮಾನಿಸಿದರು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನಾ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ನಡೆದ ಸುಮಾರು 600 ಅಡಿಯ ಉದ್ದದ ರಾಷ್ಟ್ರಧ್ವಜ ಪಥ ಸಂಚಲನ ಸಾರ್ವಜನಿಕರಲ್ಲಿ ದೇಶ ಭಕ್ತಿ ಮೂಡಿಸಿತು.
ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಹಶೀಲ್ದಾರ್ ಬಿ.ಆರತಿ, ಬಿಜೆಪಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರ ಬಾಬು, ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಸಿ.ಮೋಹನ್, ಕುಮಾರ್, ರೇಣುಕಾಪ್ರಸಾದ್, ಎನ್.ಸಿ.ಶಿವಣ್ಣ, ನಿವೃತ್ತ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಲೋಕೇಶ್, ಉಪಾಧ್ಯಕ್ಷ ಎಚ್.ವಿ.ಸುದರ್ಶನ್, ಗೌರವಾಧ್ಯಕ್ಷ ಎಚ್.ಎಸ್.ರಾಜಶೇಖರಯ್ಯ, ಹಿರಿಯ ಉಪಾಧ್ಯಕ್ಷ ಐ.ಎನ್.ಪಂಚಾಕ್ಷರಯ್ಯ, ಖಜಾಂಚಿ ಸಿ.ಎಂ. ಜಯದೇವಕುಮಾರ್, ಕಾರ್ಯದರ್ಶಿ ಟಿ.ಎಸ್.ಗಂಗಾಧರಯ್ಯ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.