ನವೆಂಬರ್ 26 ಸಂವಿಧಾನ್ ದಿವಸ್

ಪ್ರಪಂಚದಲ್ಲಿಯೇ ಒಂದು ಅತ್ಯುತ್ತಮ ಸಂವಿಧಾನವೆಂದು ಹೆಗ್ಗಳಿಕೆಗೆ ಪಾತ್ರವಾದ ಸಂವಿಧಾನ ನಮ್ಮ ಭವ್ಯ ಭಾರತದ ಸಂವಿಧಾನ.ಈ ಸಂವಿಧಾನದ ನೆರಳಿನಲ್ಲಿ ಬದುಕುತ್ತಿರುವ ನಾವುಗಳು ಒಂದಿಷ್ಟು ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಾಗೂ ಸಂವಿಧಾನ ರಚನೆಗೆ ಹಗಲಿರುಳು ದುಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವೇ ಸರಿ.

ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ಹೇಳುತ್ತವೆ. ಆದರೆ ಎಲ್ಲ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ನಮ್ಮ ಸಂವಿಧಾನ ಮಾತ್ರ ಹೇಳುತ್ತದೆ ಎಂಬ ಮಾತಿದೆ, ಅದು ನೂರಕ್ಕೆ ನೂರು ಸತ್ಯ. ನಮ್ಮ ದೇಶದ ಸಂವಿಧಾನಕ್ಕೆ ತನ್ನದೇ ಆದಂತಹ ಇತಿಹಾಸ, ಮಹತ್ವ ಹಾಗೂ ಲಿಖಿತ ಸ್ವರೂಪವಿದೆ. ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಯಾಗಿರುವ ಸಂವಿಧಾನದಲ್ಲಿ, ಎಲ್ಲ ವರ್ಗಗಳ, ಎಲ್ಲ ಸ್ತರದ ಜನರ ಹಿತವಿದೆ. ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೂ ಕೂಡ ನಮ್ಮ ಸಂವಿಧಾನ.

ಭಾರತದ ಸಂವಿಧಾನವು ಡಿಸೆಂಬರ್ 9, 1947 ರಿಂದ ನವೆಂಬರ್ 26, 1949ರ ಮಧ್ಯ ರಚನೆಗೊಂಡಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಭಾರತದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಅದೇ ರೀತಿ ನವೆಂಬರ್ 26ನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಹಿಂದೆ ಸಂವಿಧಾನ ರಚನಾ ದಿನವನ್ನು ‘ರಾಷ್ಟ್ರೀಯ ಕಾನೂನು ದಿವಸ’ ಎಂದು ಆಚರಿಸಲಾಗುತ್ತಿತ್ತು. ಕಳೆದ 2015ರಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷದಂದು ನರೇಂದ್ರ ಮೋದಿ ಸರಕಾರವು ‘ರಾಷ್ಟ್ರೀಯ ಕಾನೂನು ದಿನ’ ಎಂಬುದನ್ನು ಬದಲಿಸಿ ‘ಸಂವಿಧಾನ ದಿವಸ’ ಎಂದು ಕರೆಯಲಾಗುತ್ತಿದೆ.
ಇಂದು ನವೆಂಬರ್ 26, ನಮ್ಮ ಸಂವಿಧಾನ ದಿನ. ಈ ಸಂದರ್ಭದಲ್ಲಿ ನಮ್ಮ ಸಂವಿಧಾನದ ತಿರುಳನ್ನು ಅರಿಯುವುದು ಸೂಕ್ತ. ಅದಕ್ಕೂ ಮೊದಲು ನಮ್ಮ ಸಂವಿಧಾನದ ಹಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ.
ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ವಿಶೇಷ ಎಂದರೆ ನಮ್ಮ ಭಾರತದ ಸಂವಿಧಾನವನ್ನು ಟೈಪ್ ಮಾಡಿಲ್ಲ ಅಥವಾ ಮುದ್ರಣವನ್ನೂ ಮಾಡಿಲ್ಲ. ಅದನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಕೈಬರಹದ ರೂಪದಲ್ಲಿದೆ. ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಅದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ. ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ದೇಶದ ಸಂವಿಧಾನದಿಂದ ಪಡೆಯಲಾಗಿದೆ. ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದ್ದು, ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆಗಳಾಗಿವೆ. ಜಪಾನ್ ದೇಶದಿಂದ ಸರ್ವೋಚ್ಛ ನ್ಯಾಯಾಲಯದ ಕಾರ್ಯನಿರ್ವಹಣೆಯ ಕಾನೂನು ಪಡೆಯಲಾಗಿದೆ. ವಿಶ್ವದ ಅತ್ಯುತ್ತಮ ಸಂವಿಧಾನ
ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು ಹಾಗೂ 98 ತಿದ್ದುಪಡಿಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳಾ ಸದಸ್ಯರಿದ್ದರು. ಅದರ ಕರಡನ್ನು 1949ರ ನವೆಂಬರ್‌ ತಿಂಗಳಿನಲ್ಲಿ ಸಲ್ಲಿಸಲಾಯಿತು. ಸಲ್ಲಿಸಿದ ಬಳಿಕವೂ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು. 1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ ಬಂದಿತು. ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಕಳೆದ 70 ವರ್ಷಗಳಲ್ಲಿ ಕೇವಲ ನೂರಕ್ಕೂ ಕಡಿಮೆ ತಿದ್ದುಪಡಿಗಳನ್ನು ನಮ್ಮ ಸಂವಿಧಾನಕ್ಕೆ ಮಾಡಲಾಗಿದೆ. ಸಂವಿಧಾನ ಕರಡು ರಚನಾ ಸಮಿತಿ
1945ರ ಜುಲೈ ತಿಂಗಳಿನಲ್ಲಿ ಆಗ ಭಾರತವನ್ನು ಆಳುತ್ತಿದ್ದ ಇಂಗ್ಲೆಂಡ್‌ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆ ಸರ್ಕಾರವು ಭಾರತದ ಸ್ವಾತಂತ್ರ್ಯ ಚಳುವಳಿಯ ತೀವ್ರತೆ ಅರಿಯುವುದರೊಂದಿಗೆ ಭಾರತದ ಕುರಿತು ತನ್ನ ಧೋರಣೆಯನ್ನು ಬದಲಿಸಿಕೊಂಡಿತ್ತು. ಭಾರತಕ್ಕೆ ಪ್ರತ್ಯೇಕ ಸಂವಿಧಾನದ ಬೇಡಿಕೆ ಈಡೇರಿಸಲು ಬ್ರಿಟೀಷ್ ಸಂಸತ್ತಿನ 3 ಮಂತ್ರಿಗಳ ಸಂಪುಟ ಉಪ ಸಮಿತಿಯನ್ನು ರಚಿಸಿ ಭಾರತಕ್ಕೆ ಕಳುಹಿಸಿತ್ತು. ನಂತರ ಸಂವಿಧಾನ ರಚನಾ ಕರಡು ಸಮಿತಿ ರಚಿಸಲಾಯಿತು.1946ರ ಡಿಸೆಂಬರ್ 9ರಂದು ಸಂವಿಧಾನ ಕರಡು ರಚನಾ ಸಮಿತಿ ಕಾರ್ಯಾರಂಭ ಮಾಡಿತ್ತು. ಮುಂದೆ 1947ರಲ್ಲಿ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಿದಾಗ ಸಂವಿಧಾನ ರಚನಾ ಸಮಿತಿಯು ಸಂಪೂರ್ಣ ಸ್ವಾಯತ್ತತೆ ಪಡೆದುಕೊಳ್ಳುವುದರೊಂದಿಗೆ ತನ್ನ ಕೆಲಸ ಮುಂದುವರೆಸಿತ್ತು. 1946ರಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ 296 ಸ್ಥಾನಗಳಿಗೆ ಚುನಾವಣೆ ನಡೆದು ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆಯ್ಕೆ ಮಾಡಿದ್ದರು. ಆ ಸಭೆಗಳು ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಆರಿಸಿದರು. ಕರಡು ಸಮಿತಿ ಸದಸ್ಯರು
ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್‌ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಲ್ಲಿ ಪ್ರಮುಖರು.
ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು. ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್, ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಷಿ ಅವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರು ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು. ನಂತರ, ಡಾ. ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್. ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ರಚನೆಯಾಗಲು ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಹಿಡಿಯಿತು. ಒಟ್ಟು ಸಂವಿಧಾನ ರಚನಾ ಸಮಿತಿಯು 166 ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು.

ನಮ್ಮ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳ ಅಡಿಯಲ್ಲಿ ಹೆಚ್ಚು ಅಧಿಕಾರವಿದೆ. ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೂ ಈ ಅಧಿಕಾರ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಬೆಂಬಲಿಗರು ಪ್ರಾದೇಶಿಕ ಪ್ರಾಮುಖ್ಯತೆಯುಳ್ಳ ಅಧಿಕಾರ ವಿಕೇಂದ್ರೀತ ಪಂಚಾಯತಿ ಪದ್ಧತಿಯನ್ನು ಅಳವಡಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಕೊನೆಗೆ ಪಂಡಿತ್ ಜವಾಹರ್‌ಲಾಲ್ ನೆಹರು ಅವರಂತಹ ಆಧುನಿಕತೆಯ ಬೆಂಬಲಿಗ ನೇತಾರರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿ ಪ್ರಬಲ ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಅಧಿಕಾರ ಕೇಂದ್ರೀಕೃತ ವ್ಯವಸ್ಥೆಯು ಸಂವಿಧಾನ ಸ್ಥಾಪನೆಯ ನಂತರದ ವರ್ಷಗಳಲ್ಲಿ ಕ್ರಮೇಣ ಅಧಿಕಾರ ವಿಕೇಂದ್ರೀಕರಣವಾಗಿದೆ. ಈ ಬೆಳವಣಿಗೆ ಸಂವಿಧಾನದ ಕೇಂದ್ರೀಕರಣ ತತ್ವಗಳಿಗೆ ಅಸಮ್ಮತವಾಗಿದೆ. ಆದರೂ ಸಂವಿಧಾನದಲ್ಲಿರುವ ಇತರ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಪ್ರಾಧಿಕಾರ, ಸರ್ವೋಚ್ಛ ನ್ಯಾಯಲಯ ಮತ್ತು ಮುಂತಾದವುಗಳು ಸಮತೋಲನವನ್ನು ಕಾಪಾಡುತ್ತವೆ. ಇತ್ತೀಚೆಗೆ ಪ್ರಾಂತೀಯ ರಾಜಕೀಯ ಪಕ್ಷಗಳು ಹೆಚ್ಚು ಜನಪ್ರಿಯತೆ ಹೊಂದುತ್ತಿರುವುದರಿಂದ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ಸಾಮಾನ್ಯವಾಗಿ, ಅಧಿಕಾರ ಹೆಚ್ಚು ವಿಕೇಂದ್ರೀಕರಣವಾಗುತ್ತಿದೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ

‘ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ; ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ’ ಎಂದು ಬರೆಯಲಾಗಿದೆ. ಆದರೂ ಕೂಡ ನಮ್ಮ ಸಂವಿಧಾನದ ಪೀಠಿಕೆಯು ಭಾರತದ ಸಂವಿಧಾನದ ಒಂದು ಭಾಗವಲ್ಲ. ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಸಂವಿಧಾನದ ಮೂಲ ಪೀಠಿಕೆಯ ತಿದ್ದುಪಡಿ
ಇದಕ್ಕೆ ಉದಾಹರಣೆ, ‘ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ’ ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು. ಪೀಠಿಕೆಯ ಮೂಲಪ್ರತಿಯಲ್ಲಿ “ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ” ಎಂದಿತ್ತು. ಎರಡು ಹೆಚ್ಚಿನ ಪದಗಳಾದ “ಸಮಾಜವಾದಿ” ಮತ್ತು “ಜಾತ್ಯಾತೀತ” ಪದಗಳನ್ನು 1976ರಲ್ಲಿ ಸಂವಿಧಾನದ 42ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು. ನಮ್ಮ ಸಂವಿಧಾನ ಹಾಗೂ ಸವೋಚ್ಛ ನ್ಯಾಯಾಲಯ
ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಮಾರ್ಗಸೂಚಿಗಳನ್ನು ಎತ್ತಿ ತೋರಿಸುತ್ತದೆ. ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗೂ ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ.

ಪೀಠಿಕೆಯ ಮೊದಲ ಪದಗಳು: “ನಾವು, ಜನರು’-ಭಾರತದಲ್ಲಿ ಅಧಿಕಾರ ಜನಗಳ ಕೈಯಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ-ನವೆಂಬರ್-26-1949 ಎಂದು ಹೇಳುತ್ತದೆ.

ಸಾರ್ವಭೌಮ-ಸಮಾಜವಾದಿ-ಜಾತ್ಯತೀತ ಸಾರ್ವಭೌಮ ಎಂಬ ಪದದ ಅರ್ಥವು; ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಅಂದರೆ ಭಾರತವು ಹೊರಗಿನ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಇಲ್ಲ. ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ, ಕಾನೂನು ಸುವ್ಯವಸ್ಥೆ ಭಾರತದ ಪ್ರಜೆಗಳನ್ನು ಕಾಪಾಡುತ್ತದೆ ಎಂದು ಅರ್ಥ. ಸಮಾಜವಾದಿ ಪದವು ಪೀಠಿಕೆಗೆ 1976ರಲ್ಲಿ 42ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರವೂ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ಅರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ. ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ. ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ 1976ರ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ ಎಂಬುದಾಗಿದೆ.ಹಾಗೂ ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಪ್ರಜಾಪ್ರಭುತ್ವ-ಗಣತಂತ್ರ
ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ 18 ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದ ಗಣತಂತ್ರದಲ್ಲಿ, ಆ ರಾಜ್ಯದ ಮುಖ್ಯಸ್ತನನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಆರಿಸಲಾಗುವುದು. ರಾಷ್ಟ್ರಪತಿಯನ್ನು 5 ವರ್ಷಗಳ ಒಂದು ನಿರ್ಧಿಷ್ಟ ಅವಧಿಗೆ ಚುನಾಯಿಸಲಾಗುವುದು. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂವಿಧಾನ ರಚನೆ ಮಾಡಿದವರು ಅವಕಾಶ ಕಲ್ಪಿಸಿದ್ದಾರೆ. ಸಂಸತ್ತಿನಲ್ಲಿ ಸಾಮಾನ್ಯ ಬಹುಮತದಿಂದ ತಿದ್ದುಪಡಿ ಮತಕ್ಕೆ ಬಂದಾಗ ಅಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದರು ಒಪ್ಪಿದರೆ, ಆ ತಿದ್ದುಪಡಿಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಬಹುದು. ಇನ್ನು ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರಲ್ಲಿ 3ರಲ್ಲಿ 2 ಭಾಗ ಸಂಸದೀಯರು ತಿದ್ದುಪಡಿಯನ್ನು ಅಂಗೀಕರಿಸಿದರೆ ಅ ತಿದ್ದುಪಡಿ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಬಹುದು. ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗೆಗಿನ ತಿದ್ದುಪಡಿಗಳಿಗೆ ಮೇಲಿನಂತೆ ಸಂಸತ್ತಿನ ವಿಶೇಷ ಬಹುಮತವಿದ್ದು, ಅದರೊಂದಿಗೆ ಕನಿಷ್ಟ ಅರ್ಧ ರಾಜ್ಯಗಳ ಶಾಸನಸಭೆಗಳಲ್ಲಿ ವಿಶೇಷ ಬಹುಮತ ಗಳಿಸಿದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು. ಭಾರತದ ಸಂವಿಧಾನ ತಿದ್ದುಪಡಿ ಒಂದು ಕಠಿಣ ಪ್ರಕ್ರಿಯೆಯಾಗಿದೆ.

‌‌‌ ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತವಾದ ಭಾರತದ ಸಂವಿಧಾನವು ಅವುಗಳಿಗಿಂತ ವಿಭಿನ್ನವಾಗಿದೆ. ಹೇಗೆಂದರೆ ಶಾಸಕಾಂಗ ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ ಶಾಸಕಾಂಗವು ಕಾರ್ಯಾಂಗ ಮತ್ತು ನ್ಯಾಯಾಂಗ ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಅತ್ಯುತ್ತಮವಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗಕ್ಕೆ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ಆದರೆ ಆ ಟೀಕೆಗೆ ಉತ್ತರವೂ ಕೂಡ ನಮ್ಮ ಸಂವಿಧಾನದಲ್ಲಿಯೇ ಅಡಕವಾಗಿದೆ ಅದರ ಅನುಷ್ಠಾನವನ್ನೂ ಕೂಡ ಇಂದಿನ ಸರಕಾರಗಳು ಮಾಡುತ್ತಿವೆ.ಆದರೆ ವೇಗ ಸಾಲದು ಅಷ್ಟೇ..
ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ಸಂವಿಧಾನಕ್ಕೆ ಭಾರತದ ಸಂವಿಧಾನವೇ ಸಾಟಿ.
ಭಾರತವೆಂದರೆ ಹಲವು ರೀತಿಯ ಮತ,ಜನಾಂಗ,ಸಂಪ್ರದಾಯ,ಸಂಸ್ಕೃತಿ,ಭಾಷೆಗಳನ್ನು ಒಳಗೊಂಡಿರುವ ರಾಷ್ಟ್ರ.ಇಷ್ಟೆಲ್ಲ ಬಾಹುಳ್ಯವಿರುವ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯ ಕನಸ್ಸನ್ನು ಕಂಡು ಅದಕ್ಕೋಸ್ಕರ ಹಗಲಿರುಳು ದುಡಿದು ಪ್ರಪಂಚಕ್ಕೆ ಒಂದು ಮಾದರಿಯಾದ ಸಂವಿಧಾನ ನೀಡಿರುವ ಹಿರಿಯರ ಆಶಯವನ್ನು ನಾಗರೀಕರಾದ ನಾವುಗಳು ಸಾಕಾರಗೊಳಸುವ ಸಂಕಲ್ಪದೊಂದಿಗೆ ಇಂದಿನ ಸಂವಿಧಾನ ದಿವಸ್ ಕಾರ್ಯಕ್ರಮ ಆಚರಿಸೋಣ,ಜಾಗೃತರಾಗೋಣ ಜಾಗೃತಿ ಮಾಡೋಣ.

ಪ್ರಶಾಂತ್ ದಸೂಡಿ.
ವಕೀಲರು. ತುಮಕೂರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!