ಮಧುಗಿರಿ: ವಿದ್ಯಾರ್ಥಿಯೊಬ್ಬರನ್ನು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರೊಬ್ಬರು ಆವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಧುಗಿರಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಶನಿವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ತುಮಕೂರಿನಿಂದ ಮಧುಗಿರಿಗೆ ಹೊರಟ್ಟಿದ್ದ ಬಸ್‌ಗೆ ವಿದ್ಯಾರ್ಥಿ ಬಸ್ ಪಾಸ್ ಹೊಂದಿದ್ದ ವಿದ್ಯಾರ್ಥಿಯೊಬ್ಬರು ಹತ್ತಲು ಹೋದಾಗ ಬಸ್ ನಿರ್ವಾಹಕರೊಬ್ಬರು ಆವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಗ್‌ಗೆ ಕಾಲಿನಿಂದ ಒದ್ದಿದ್ದಾರೆ. ಹಾಗಾಗಿ ಕೂಡಲೇ ನಿರ್ವಾಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳೆಲ್ಲರೂ ರಿಯಾಯಿತಿ ವಿದ್ಯಾರ್ಥಿ ಬಸ್ ಪಾಸ್ ತೆಗೆದುಕೊಂಡಿರುತ್ತಾರೆ. ಹಾಗಾಗಿ ನಿರ್ವಾಹಕರು ವಿದ್ಯಾರ್ಥಿಗಳನ್ನು ಬಸ್ ಹತ್ತಲು ಬಿಡುವುದಿಲ್ಲ. ಕೇಳಿದರೆ ಹಣ ಪಾವತಿಸುವ ಪ್ರಯಾಣಿಕರಿಗೆ ಮೊದಲು ಅವಕಾಶ ನೀಡಬೇಕೆಂದು ನಮಗೆ ಮೇಲಾಧಿಕಾರಿಗಳು ಸೂಚಿಸಿದ್ದಾರೆಂದು ಹೇಳುತ್ತಾರೆ. ಬಸ್ ಇನ್ನೆನು ಹೊರಡುತ್ತದೆ ಎಂದಾಗ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಹೇಳುತ್ತಾರೆ. ಆಗ ಕುಳಿತುಕೊಳ್ಳಲು ಸೀಟುಗಳು ಸಿಗದೆ ವಿದ್ಯಾರ್ಥಿಗಳು ಮಧುಗಿರಿ ಬರುವವರೆಗೂ ನಿಂತುಕೊಂಡೆ ಪ್ರಯಾಣಿಸಬೇಕಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಹಲವಾರು ವಿದ್ಯಾರ್ಥಿಗಳು ಗುಂಪುಗೂಡಿ ನಿರ್ವಾಹಕರ ವಿರುದ್ಧ ಧಿಕ್ಕಾರ ಕೂಗಿದರು.
ಸ್ಥಳಕ್ಕೆ ಪಿಎಸ್‌ಐ ಭೇಟಿ: ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕೂಡಲೇ ಭೇಟಿ ನೀಡಿದ ಪಿಎಸ್‌ಐ ವಿಜಿಕುಮಾರ್ ವಿದ್ಯಾರ್ಥಿಗಳ ಮನವೊಲಿಸಿ ನಿರ್ವಾಹಕರಿಗೆ ವಿದ್ಯಾರ್ಥಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಬುದ್ದಿವಾದ ಹೇಳಿದರು. ನಂತರ ನಿರ್ವಾಹಕರು ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದರು. ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ತುಮಕೂರಿಗೆ ಹೋಗುವ ಬಸ್‌ಗಳು ಪ್ರತಿದಿನ ಸರಿಯಾದ ಸಮಯಕ್ಕೆ ಬರುವುದಿಲ್ಲ. ಬೆಳ್ಳಿಗ್ಗೆ ೭ ಗಂಟೆಗೆ ಬರಬೇಕಿದ್ದ ಬಸ್ ೯ ಗಂಟೆಯಾದರೂ ಬರುವುದಿಲ್ಲ. ಪ್ರತಿ ದಿನ ಒಂದು ಗಂಟೆ ತಡವಾಗಿ ಶಾಲಾ-ಕಾಲೇಜುಗಳಿಗೆ ಹೋಗಬೇಕಾಗಿದೆ. ತಾಲ್ಲೂಕಿನ ಹಲವಾರು ಗ್ರಾಮಗಳಿಂದ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತುಮಕೂರು ವಿಶ್ವ ವಿದ್ಯಾಲಯಕ್ಕೆ ಸೇರಿದಂತೆ ಹಲವು ಕಾಲೇಜುಗಳಿಗೆ ತೆರಳಲು ಮಧುಗಿರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಪ್ರತಿ ದಿನ ಸರಿಯಾಗಿ ಬೆಳ್ಳಿಗ್ಗೆ ೬.೨೦ಕ್ಕೆ ಮಧುಗಿರಿಯಿಂದ ಬಸ್ ಹೊರಟರೆ, ನಾವು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪುತ್ತೇವೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುವುದಿಲ್ಲ. ನಾವು ಕಾಲೇಜಿಗೆ ತಲುಪುವುದು ಹೇಗೆ ವಾರದಲ್ಲಿ ಮೂರ್ನಾಲ್ಕು ದಿನ ಇದೇ ರೀತಿಯಾಗುತ್ತದೆ ಎಂದು ಪ್ರತಿದಿನ ತುಮಕೂರಿಗೆ ಹೋಗುವ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಬಹುತೇಕ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ತೆಗೆದುಕೊಂಡಿರುತ್ತಾರೆ. ಹಾಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಾಯುವ ಅನಿವಾರ್ಯತೆಯಿದ್ದು, ಖಾಸಗಿ ಬಸ್‌ಗಳಲ್ಲಿ ದುಬಾರಿ ಬೆಲೆ ನೀಡಿ ಹೋಗುವ ಸ್ಥಿತಿಯಲ್ಲಿರುವುದಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮನವಿ ಪತ್ರ ನೀಡಿದರು. ಈ ವೇಳೆ ವಿದ್ಯಾರ್ಥಿಗಳಾದ ಅಂಕಿತ್ ಎಂ.ಆರ್., ವಿಶ್ವಾಸ್, ಭಾರ್ಗವ್, ನವೀನ್ ನಂದ, ರಘು ಗೌಡ, ಹೇಮಂತ್, ನಂದನ್, ಲಿಖಿತ, ಹರ್ಷಿತ, ಲಾವಣ್ಯ, ರಾಕೇಶ್, ದರ್ಶನ್, ಅಕ್ಷಯ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು.