ಗುಬ್ಬಿ: ಪಂಚರತ್ನ ಯೋಜನೆಯಲ್ಲಿ ಅಳವಡಿಸಿಕೊಂಡ ಮಹಿಳೆಯರ ಸಬಲೀಕರಣ ಕಾರ್ಯಕ್ರಮಕ್ಕೆ ಪೂರಕವಾಗಿ ಮಾಜಿ ಸಿಎಂ ಕುಮಾರಣ್ಣ ಅವರು ಸ್ತ್ರೀ ಶಕ್ತಿ ಸಂಘದ ಸಾಲದ ಸುಳಿಯಲ್ಲಿ ಸಿಲುಕಿರುವ ಮಹಿಳೆಯರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡಲು ಸಾಲ ಮನ್ನಾ ಘೋಷಣೆ ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.
ತಾಲ್ಲೂಕಿನ ಕಡಬ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಹಾಗೂ ಪಂಚರತ್ನ ಕುರಿತ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತೊರೆದ ಹಲವು ಮುಖಂಡರನ್ನು ಜೆಡಿಎಸ್ ಗೆ ಬರ ಮಾಡಿಕೊಂಡ ಮಾತನಾಡಿದ ಅವರು ಸ್ವಾಭಿಮಾನಿ ಮತದಾರರು ಅಭಿವೃದ್ದಿ ಬಯಸಿದ್ದಾರೆ. ಸಮಗ್ರ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅವಶ್ಯ ಜನರಿಗೆ ಈಗ ತಿಳಿದಿದೆ. ಇದರ ನಿಟ್ಟಿನಲ್ಲಿ ಕುಮಾರಣ್ಣ ಅವರ ಜೆಡಿಎಸ್ ಪ್ರಣಾಳಿಕೆ ಒಪ್ಪಿ ನೂರಾರು ಕಾರ್ಯಕರ್ತರು ಸ್ವ ಇಚ್ಛೆಯಿಂದ ಬರುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ನಾಟಕದ ಮಾತುಗಳಿಂದ ಮೋಡಿ ಮಾಡುವ ಜೊತೆಗೆ ಆಸೆ ಆಮಿಷ ಒಡ್ಡುವ ತಂತ್ರಗಾರಿಕೆ ಬಗ್ಗೆ ತಿಳಿದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಳೆದ 20 ವರ್ಷದಿಂದ ಅಭಿವೃದ್ದಿ ಆಗಿರದ ಬಗ್ಗೆ ಮಾತು ಈಗ ಕೇಳುತ್ತಿದೆ. ಅದಕ್ಕೆ ಅಭಿವೃದ್ದಿ ಎಂದರೆ ಏನು ಎಂದು ಶಾಸಕರು ಪ್ರಶ್ನಿಸಿದ್ದಾರೆ. ಈ ಜೊತೆಗೆ ಪ್ರಶ್ನಿಸಿದ ನನ್ನನ್ನು ತುರುವೇಕೆರೆ ಎನ್ನುತ್ತಾರೆ. ಆದರೆ ನಾನು ಸಹ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರದವನು ಎಂಬುದು ತಿಳಿದಿರಲಿ. ಯಾವುದಕ್ಕೂ ಹೆದರಿ ಓಡುವ ಮಗ ನಾನಲ್ಲ ಎಂದ ಅವರು ಮುಳುಗುವ ಹಡಗು ಎನ್ನುವ ಮಂದಿಗೆ ಜೆಡಿಎಸ್ ಈ ಬಾರಿ ನಿಮ್ಮನ್ನು ಮುಳುಗಿಸುವ ಹಡಗು ಎಂದು ಎಚ್ಚರಿಕೆ ನೀಡಲಿದೆ ಎಂದರು.
ಕಾಂಗ್ರೆಸ್ ತೊರೆದು ಹಲವು ಬೆಂಬಲಿಗರ ಜೊತೆ ಜೆಡಿಎಸ್ ಸೇರ್ಪಡೆಗೊಂಡ ಮುಖಂಡ ಗಂಗಸಂದ್ರ ಮಂಜುನಾಥ್ ಮಾತನಾಡಿ ರೈತ ಪರ ಕೆಲಸಕ್ಕೆ ಜೆಡಿಎಸ್ ಒಂದೇ ಸೂಕ್ತ ಪಕ್ಷ. ಕೇವಲ ವ್ಯಾಪಾರಕ್ಕೆ ಅಧಿಕಾರ ಪಡೆಯುವ ಬಿಜೆಪಿ ಮತ್ತು ಕಾಂಗ್ರೆಸ್ ಜನರ ವಿರೋಧಿ ಎನಿಸಿದೆ ಎಂದ ಅವರು ಶಾಸಕರ ರಾಜೀನಾಮೆ ಡಿಸೆಂಬರ್ ತಿಂಗಳಿಂದ ಜನವರಿಗೆ ವರ್ಗಾವಣೆಯಾಗಿದೆ. ರಾಜೀನಾಮೆ ನಾಟಕ ಪ್ರತಿ ವಾರ ನಡೆಸುವ ಕೆಲ ಮುಖಂಡರ ಪೈಕಿ ಈ ಹಿಂದೆ ಜೆಡಿಎಸ್ ಪಕ್ಷದ ಯುವ ಘಟಕ ಅಧ್ಯಕ್ಷರಾಗಿದ್ದ ವೆಂಕಟೇಶ್ ಅವರು ಈಗ ಶಾಸಕರ ಬೆಂಬಲಿಗರಾಗಿ ಒಕ್ಕಲಿಗರ ಸಮುದಾಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಆದರೆ ಕಳೆದ 20 ವರ್ಷದಿಂದ ಗುಬ್ಬಿ ಶಾಸಕರಿಂದ ಒಕ್ಕಲಿಗರಿಗೆ ಏನು ಸಿಕ್ಕಿದೆ ಮೊದಲು ತಿಳಿಸಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಯ್ಯ ಹಾಗೂ ಕುನ್ನಾಲ ಮುಖಂಡ ತೋಫಿಕ್ ಮಾತನಾಡಿದರು.
ವೇದಿಕೆಯಲ್ಲಿ ಬೋರೇಗೌಡ, ಪ್ರಕಾಶ್, ಫಿರ್ದೋಸ್ ಆಲಿ, ರಿಯಾಜ್ ಖಾನ್, ರುದ್ರೇಶ್, ಮಧು, ಅಜ್ಗರ್, ಅತಿಕ್, ನಾರಾಯಣ್, ಕೃಷ್ಣಮೂರ್ತಿ, ರವೀಶ್, ರಂಗಸ್ವಾಮಿ, ಸಣ್ಣಪ್ಪ, ಶಾಂತಕುಮಾರ್, ಮಲ್ಲಿಕಾರ್ಜುನ್ ಇತರರು ಇದ್ದರು