ಗುಬ್ಬಿ: ಒಕ್ಕಲಿಗ ಸಮಾಜಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೊಡುಗೆ ಏನಿಲ್ಲ ಎಂದು ಹೇಳಿಕೆ ನೀಡಿದ ಜೆಡಿಎಸ್ ಯುವ ಘಟಕದ ಉಚ್ಛಾಟಿತ ಅಧ್ಯಕ್ಷ ವೆಂಕಟೇಶ್ ಅವರೇ ಕಳೆದ 20 ವರ್ಷದಿಂದ ಒಕ್ಕಲಿಗ ಸಮುದಾಯಕ್ಕೆ ಗುಬ್ಬಿ ಕ್ಷೇತ್ರದಲ್ಲಿರುವ ನಿಮ್ಮ ಶಾಸಕರ ಕೊಡುಗೆ ಏನು ಮೊದಲು ತಿಳಿಸಿ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಮುಖಂಡ ಗಂಗಸಂದ್ರ ಮಂಜುನಾಥ್ ನೇರ ಪ್ರಶ್ನೆ ಹಾಕಿದರು.
ತಾಲ್ಲೂಕಿನ ಕಡಬ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಾಲಯ ಬಳಿ ಜೆಡಿಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಸೇರ್ಪಡೆಯಾದ ನಂತರ ಮಾತನಾಡಿದ ಅವರು ರಾಜೀನಾಮೆ ಪರ್ವ ಹೆಸರಿನಲ್ಲಿ ಅಮ್ಮನಘಟ್ಟ ಗ್ರಾಮದಲ್ಲಿ ವೇದಿಕೆ ಮಾಡಿಕೊಂಡು ಕುಮಾರಸ್ವಾಮಿ ಬಗ್ಗೆ ಮಾತನಾಡಿದ ವೆಂಕಟೇಶ್ ಅವರು ಜೆಡಿಎಸ್ ಪಕ್ಷದಲ್ಲಿದ್ದು ಏನೆಲ್ಲಾ ದುಡಿದುಕೊಂಡು ಬೆಳೆದಿದ್ದೀರಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಕುಮಾರಣ್ಣ ಅವರ ಬಗ್ಗೆ ಮಾತನಾಡುವ ಅರ್ಹತೆ ತಮಗಿಲ್ಲ. ಒಕ್ಕಲಿಗ ಸಮುದಾಯಕ್ಕೆ ತಾವೇನು ಕೊಡುಗೆ ನೀಡಿದ್ದೀರಿ. ಒಂದು ಸಮುದಾಯ ಭವನ ಯಾವ ಹಂತದಲ್ಲಿದೆ ಗುಬ್ಬಿಯಲ್ಲಿ ಎಂಬುದು ಒಕ್ಕಲಿಗರಿಗೆ ತಿಳಿದಿದೆ ಎಂದು ಕಿಡಿಕಾರಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರಾಜೀನಾಮೆ ಅಂತ ಹೇಳಿ ಮೂವತ್ತು ಜನ ರಾಜೀನಾಮೆ ಕೊಡುತ್ತಿದ್ದೀರಿ. ಅದು ಬಲವಂತದ ರಾಜೀನಾಮೆ ಹಾಗೂ ಏನೋ ತಿಳಿಯದ ಮುಗ್ದರ ರಾಜೀನಾಮೆ. ನಂತರ ವೇದಿಕೆಯಲ್ಲಿ ಅದೇ ನಾಲ್ಕು ಜನ ಮುಖಂಡರೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿರಿ ಎಂದು ವ್ಯಂಗ್ಯವಾಡಿದ ಅವರು ಕಾಂಗ್ರೆಸ್ ಸೇರ್ಪಡೆ ಬೃಹತ್ ಸಮಾವೇಶ ಮಾಡುವ ಬಗ್ಗೆ ಮಾತನಾಡುತ್ತಿರಿ. ಅದಕ್ಕೆ ಮುನ್ನ ಶಾಸಕರ ರಾಜೀನಾಮೆ ಮೊದಲು ಕೊಡಿಸಿ ಸ್ವಾಮಿ. ಡಿಸೆಂಬರ್ ನಲ್ಲಿ ರಾಜೀನಾಮೆ ಅಂತ ಹೇಳಿದ್ದ ನೀವೇ ಈಗ ಜನವರಿ ಅಥವಾ ಫೆಬ್ರವರಿ ಅಂತ ಹೇಳುವುದು ಹಾಸ್ಯಾಸ್ಪದ ಎನಿಸುವುದಿಲ್ಲವೇ ಎಂದು ಮತ್ತೊಂದು ಪ್ರಶ್ನೆ ಹಾಕಿದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.