ಗುಬ್ಬಿ: ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಡಿಯಾಲ ಕ್ಷೇತ್ರದ ಕೆ.ಜಿ.ರಂಗಸ್ವಾಮಿ(ಡಾಬ) ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಚೇಳೂರು ಕ್ಷೇತ್ರದ ಸತೀಶ್ ರಾಜೀನಾಮೆ ನೀಡಿ ತೆರವಾಗಿದ್ದ ಕಾರಣ ನಡೆದ ಈ ಚುನಾವಣೆಯಲ್ಲಿ ರಂಗಸ್ವಾಮಿ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಓರ್ವ ಸದಸ್ಯರ ಗೈರು ಹಾಜರಾತಿ ಮಧ್ಯೆ ಒಟ್ಟು 21 ಮಂದಿ ಸದಸ್ಯರ ಸಮ್ಮುಖದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ಕೆ.ಜಿ.ರಂಗಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಒದಗಿಸುವ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಸದಸ್ಯರ ಒಮ್ಮತ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಜೊತೆ ವಿಶೇಷ ಅನುದಾನ ತರಲು ಬದ್ಧವಾಗಿದ್ದೇವೆ. ಈ ಹಿಂದೆ ಇದ್ದ ಪಂಚಾಯಿತಿಗಳನ್ನು ಹೆಚ್ಚಿಸಿ ಅಧಿಕಾರ ವಿಕೇಂದ್ರೀಕರಣ ಮಾಡಿದ ಸರ್ಕಾರ ಅದರಂತೆ ಅನುದಾನ ನೀಡುವ ಕೆಲಸ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಸರ್ಕಾರ ಗ್ರಾಮೀಣಾಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಪಡಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ವಿಜಯಕುಮಾರ್, ಶಿವಣ್ಣ, ಸಿದ್ದರಾಜು, ಯತೀಶ್, ದಯಾನಂದ್, ಸುಜಾತಮ್ಮ, ಮುಖಂಡರಾದ ಶಿವಕುಮಾರ್, ಗೋಪಿ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಕಂದಾಯ ನಿರೀಕ್ಷಕ ನಾಗಭೂಷಣ, ಪಿಡಿಓ ಪ್ರಶಾಂತ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.