ಕಾಗೆ ಗೂಡು ರೀತಿ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುವುದು ಸರಿಯಲ್ಲ : ಮುಖಂಡ ಜಿ.ಎಸ್.ಪ್ರಸನ್ನಕುಮಾರ್

ಗುಬ್ಬಿ: ಬಲವರ್ಧನೆಗೊಂಡ ಕಾಂಗ್ರೆಸ್ ಗೂಡನ್ನು ಕಾಗೆ ಗೂಡಿನ ರೀತಿ ಬದಲಿಸಲು ಕೋಗಿಲೆ ಮುಂದಾಗಿದೆ. ಗೂಡಿನಲ್ಲಿ ತನ್ನ ಮೊಟ್ಟೆಯನ್ನು ಮರಿಗಳನ್ನು ಬೆಳೆಸುವ ಹುನ್ನಾರಕ್ಕೆ ನಮ್ಮ ಜಿಲ್ಲಾ ಮುಖಂಡರನ್ನು ತಾಯಿ ಕಾಗೆ ರೀತಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಎಚ್ಚರವಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾರ್ಮಿಕವಾಗಿ ಕಥೆಯ ಮೂಲಕ ಪಕ್ಷದ ಆಂತರಿಕ ವಿಚಾರ ತಿಳಿಸಿದರು.

ತಾಲ್ಲೂಕಿನ ಕಡಬ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪಂಚಾಯಿತಿವಾರು ಕಾಂಗ್ರೆಸ್ ಸಮಚಿತ್ತ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು ಸ್ವಂತ ಗೂಡಿಲ್ಲದ ಗುಬ್ಬಿ ಶಾಸಕರು ಈಗ ಕಾಂಗ್ರೆಸ್ ಪಕ್ಷವನ್ನು ಕಾಗೆ ತಾರುಣ್ಯ ಕಥೆಯ ರೀತಿ ಬಳಸುತ್ತಿದ್ದಾರೆ. ಇಲ್ಲಿ ತಾಯಿ ಕಾಗೆ ಮುಗ್ಧತೆಯನ್ನು ದುರ್ಬಳಕೆ ಮಾಡುವ ರೀತಿ ನಡೆಯುತ್ತಿದೆ. ಕಾಂಗ್ರೆಸ್ ಗೂಡು ಎಂದಿಗೂ ಕೋಗಿಲೆ ಎಂಟ್ರಿಗೆ ಅವಕಾಶ ನೀಡುವುದಿಲ್ಲ. ಕಾರ್ಯಕರ್ತರ ದೃಢ ನಿಲುವು ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಒಗ್ಗೂಡಿ ಪಕ್ಷ ಹಿಡಿತಕ್ಕೆ ತೆಗೆದುಕೊಳ್ಳಿ ಎಂದು ಕರೆ ನೀಡಿದರು.

ಕಳೆದ ಇಪ್ಪತ್ತು ವರ್ಷದಿಂದ ಅಭಿವೃದ್ದಿ ಕಾಣದ ಕ್ಷೇತ್ರದಲ್ಲಿ ಈಚೆಗೆ ನಡೆದ ಚೇಳೂರು ಪಂಚಾಯಿತಿ ಹಗರಣ ಜೀವಂತ ಸಾಕ್ಷಿ. ರಸ್ತೆ ಮಾಡದೆ ಲಕ್ಷಾಂತರ ರೂಗಳನ್ನು ಗುಳುಂ ಮಾಡಿದ್ದಾರೆ. ಅದು ಓರ್ವ ಅಧಿಕಾರಿ. ರಾತ್ರೋರಾತ್ರಿ ರಸ್ತೆ ರಿಪೇರಿಗೆ ಪ್ರಯತ್ನಿಸಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಅಧಿಕಾರಿ ನೋಡಿದರೆ ಆಡಳಿತ ಕುಸಿದಿರುವುದಕ್ಕೆ ಉದಾಹರಣೆ ಆಗಿದೆ ಎಂದು ದೂರಿದ ಅವರು ಬಿಜೆಪಿ ಆಡಳಿತಕ್ಕೆ ಬೇಸತ್ತ ಜನ ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. ಇದೇ ಸುಸಮಯ ಗುಬ್ಬಿಯಲ್ಲೂ ಕಾಂಗ್ರೆಸ್ ಶಾಸಕರ ಆಯ್ಕೆ ಶತಸಿದ್ಧ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ. ಮೊದಲಿನಿಂದ ಪಕ್ಷಕ್ಕೆ ದುಡಿದ ನಮ್ಮವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಗುಬ್ಬಿ ಶಾಸಕರ ಆಹ್ವಾನವನ್ನು ವಿರೋಧಿಸುತ್ತೇವೆ. ಯಾವುದೇ ಜನಪರ ಕೆಲಸ ಮಾಡದೆ ಅಭಿವೃದ್ದಿ ಶೂನ್ಯ ಎಂಬ ಹಣೆಪಟ್ಟಿ ಕಟ್ಟಿಕೊಂಡು ಜನರಿಗೆ ಮೋಸ ಮಾಡಿದವರ ಬರುವಿಕೆ ಅಗತ್ಯವಿಲ್ಲ. ಯಾವುದೇ ಪಕ್ಷಕ್ಕೆ ಹೋದರೋ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ತಿಳಿದೂ ಕಾಂಗ್ರೆಸ್ ಯಾಮಾರುವುದು ಸರಿಯಲ್ಲ. ಭೂ ಹಗರಣವು ಇಂದಿಗೂ ಅವರ ವೈಫಲ್ಯಕ್ಕೆ ಸಾಕ್ಷಿ. ಅವರ ಬೆಂಬಲಿಗರು ನಡೆಸಿದ ಹಗರಣಕ್ಕೆ ನಾನೇ ತನಿಖೆಗೆ ಹೇಳಿದೆ ಎಂದು ಹೇಳಿ ನಂತರ ಜೈಲಿಗೆ ಹೋಗಿ ಆರೋಪಿಗಳ ಜೊತೆ ಮಾತನಾಡಿ ಅವರನ್ನು ಬಿಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ ಹಣದ ಜೊತೆ ಬರುವ ಅಭ್ಯರ್ಥಿ ನೋಡುವ ಪರಿ ಮೊದಲು ಬಿಡಬೇಕು. ಬಿಜೆಪಿ ವಿರೋಧದ ಅಲೆಯನ್ನು ಸರಿಯಾಗಿ ಬಳಸಿಕೊಳ್ಳಲು ಪಂಚಾಯಿತಿ ಮಟ್ಟದಲ್ಲಿ ಬಲವರ್ಧನೆ ಕೆಲಸ ಮಾಡಬೇಕು. ಯುವಕರನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ. ಈ ಕಾರ್ಯಕ್ಕೆ ಸಮಚಿತ್ತ ಸಂಘಟನೆ ಸಭೆ ಉಪಕಾರಿ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಪಕ್ಷ ಮಾಡಬೇಕು ಎಂದರು.

ಕಾಂಗ್ರೆಸ್ ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಡಬ ಶಿವಕುಮಾರ್ ಮಾತನಾಡಿ ಬಿಜೆಪಿ ರೌಡಿಗಳನ್ನು ರಾಜಕೀಯಕ್ಕೆ ಕರೆತರುವ ಜೊತೆಗೆ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣ ಪಾಠ ಅಳವಡಿಸುವ ಚಿಂತನೆ ಮಾಡಿದೆ. ಇದು ಹಿಂದುತ್ವದ ಭಾಗವೇ. ಬಿಜೆಪಿಗೆ ನಾಚಿಕೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ, ಮುಖಂಡರಾದ ಕೆ.ಆರ್.ತಾತಯ್ಯ, ಟಿ.ಆರ್.ಚಿಕ್ಕರಂಗಯ್ಯ, ಶಶಿಕಿರಣ್, ಎಂ.ವಿ.ಶ್ರೀನಿವಾಸ್, ಸಲೀಂ ಪಾಷ, ಜಿ.ವಿ.ಮಂಜುನಾಥ, ಸೌಭಾಗ್ಯಮ್ಮ, ಜಿ.ಎಂ.ಶಿವಾನಂದ್, ಫಣಿ, ಚಂದ್ರಶೇಖರ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!