ಅಸ್ಪೃಶ್ಯ ಎನ್ನುವ ಪದ ಬಳಕೆ ಬಗ್ಗೆ ಕುಮಾರಸ್ವಾಮಿ ಕ್ಷಮೆಯಾಚಿಸಿ ಇಲ್ಲವಾದಲ್ಲಿ ಪ್ರತಿಭಟನೆ : ದಲಿತ ಮುಖಂಡರ ಎಚ್ಚರಿಕೆ

ಗುಬ್ಬಿ: ದಲಿತ ಮತಗಳಿಂದ ಜೆಡಿಎಸ್ ಉನ್ನತ ಮಟ್ಟಕ್ಕೇರಿದೆ. ಆದರೆ ಬಹಿರಂಗ ಸಭೆಯೊಂದರಲ್ಲಿ ಅಸ್ಪೃಶ್ಯ ಎಂಬ ಪದ ಬಳಕೆ ಮಾಡಿ ತಮ್ಮ ಮನಸ್ಥಿತಿ ತೋರಿದ್ದಾರೆ. ದಲಿತ ಸಿಎಂ ಬಗ್ಗೆ ಅವರಲ್ಲಿರುವ ಇಬ್ಬಗೆ ನೀತಿ ಕಂಡಿದೆ. ಎರಡು ಬಾರಿ ಸಿಎಂ ಹುದ್ದೆ ಅಲಂಕರಿಸಿ ಈ ರೀತಿ ಮಾತು ಆಡಬಾರದಿತ್ತು. ಅಸ್ಪೃಶ್ಯ ಪದ ವಾಪಸ್ ಪಡೆದು ಕೂಡಲೇ ಕ್ಷಮೆಯಾಚಿಸಬೇಕು. ಮುಂದಿನ ಸೋಮವಾರ ಈ ಬಗ್ಗೆ ಪ್ರತಿಭಟನೆ ಮಾಡುತ್ತೇವೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಂಬೇಡ್ಕರ್ ಆಶಯಕ್ಕೆ ದಕ್ಕೆ ತರುವ ಮಾತುಗಳು ಕುಮಾರಸ್ವಾಮಿ ಅವರ ಬಾಯಲ್ಲಿ ಬರಬಾರದಿತ್ತು. ದಲಿತರ ಬಗ್ಗೆ ಅವರ ಕೊಳಕು ಮನಸ್ಸು ಅನಾವರಣಗೊಂಡಿದೆ. ಇಬ್ರಾಹಿಂ ಅವರನ್ನು ಸಿಎಂ ಅಭ್ಯರ್ಥಿ ಮಾಡಿ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಅವರೇನು ಅಸ್ಪೃಶ್ಯರೇ ಎನ್ನುವ ಮಾತು ಅವರ ಆಂತರಿಕ ಅಭಿಪ್ರಾಯ ಎನಿಸಿದೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಪಂಚರತ್ನ ಯಾತ್ರೆಯ ವೇಳೆ ನಮ್ಮ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ ಅವರು ಗುಬ್ಬಿಯಲ್ಲಿ ದಲಿತ ಸಮುದಾಯದ 38 ಸಾವಿರ ಮತಗಳು ಮೊದಲಿನಿಂದ ಜೆಡಿಎಸ್ ಪರ ಇತ್ತು. ಈಗ ಅವರ ಹೇಳಿಕೆಗೆ ಪಕ್ಷದಿಂದ ದೂರ ಉಳಿಯಲಿದ್ದಾರೆ ಎಂದರು

ದಲಿತ ಮುಖಂಡ ಕೊಡಿಯಾಲ ಮಹದೇವು ಮಾತನಾಡಿ ಜೆಡಿಎಸ್ ಎಸ್ಸಿ ಘಟಕದ ತಾಲ್ಲೂಕು ಅಧ್ಯಕ್ಷನಾಗಿ ದುಡಿದ ನಾನು ಕುಮಾರಣ್ಣ ಅವರ ಪಕ್ಕ ಅಭಿಮಾನಿಯಾಗಿದ್ದೆ. ಆದರೆ ಕುಮಾರಣ್ಣ ಅವರ ಮನದ ಇಂಗಿತ ಕಲುಷಿತವಾಗಿದೆ. ಜಾತ್ಯತೀತ ಹೆಸರಿನಲ್ಲಿ ಜಾತೀಯತೆ ಮಾಡಿದ್ದಾರೆ. ಅಸ್ಪೃಶ್ಯ ಪದ ಬಳಕೆ ಖಂಡನೀಯ. ಈ ನಿಟ್ಟಿನಲ್ಲಿ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಹಾಗೆಯೇ ಕುಮಾರಣ್ಣ ಕ್ಷಮಾಪಣೆ ಕೇಳಲೇಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಬಿಜೆಪಿ ದಲಿತ ವಿರೋಧ ನೀತಿ ಅನುಸರಿಸಿದೆ. 60 ಲಕ್ಷ ಮಕ್ಕಳ ಸ್ಕಾಲರ್ ಶಿಪ್ ಕಿತ್ತುಕೊಳ್ಳುವ ಮೂಲಕ ಮಕ್ಕಳ ಶಿಕ್ಷಣ ಹಕ್ಕು ಚ್ಯುತಿ ಮಾಡುತ್ತಿದೆ. ದೀನ ದಲಿತರ ಹಾಗೂ ಬಡವರ ಶಿಕ್ಷಣಕ್ಕೆ ಕತ್ತರಿ ಹಾಕಿ ಹಾಸ್ಟೆಲ್ ವ್ಯವಸ್ಥೆ ಕಿತ್ತೊಗೆಯುವ ಬಿಜೆಪಿ ಸಂವಿಧಾನ ವಿರೋಧಿ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರತ್ನಾಕರ್, ಪಾಂಡುರಂಗಪ್ಪ, ಈಶ್ವರಯ್ಯ, ಶಿವಪ್ಪ, ದೊಡ್ಡಯ್ಯ, ಮಧು, ಆನಂದ್, ಕೃಷ್ಣಪ್ಪ, ಸತೀಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!