ಗುಬ್ಬಿ: ಪಟ್ಟಣದ ಹಲವು ಪ್ರಮುಖ ರಸ್ತೆಯ ಎರಡು ಬದಿ ಫುಟ್ ಪಾತ್ ಅಂಗಡಿಗಳು ತಲೆ ಎತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಹಿನ್ನಲೆ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ನೇತೃತ್ವದಲ್ಲಿ ಅಂಗಡಿ ತೆರವು ಮಾಡಲು ಸೂಚನೆ ನೀಡಿದರು.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುವ ರಸ್ತೆ ಬದಿ ಅಂಗಡಿಗಳು ವಾಹನ ಸಂಚಾರರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ತೊಂದರೆ ನೀಡುತಿತ್ತು. ಈ ಹಿನ್ನಲೆ ಸಂತೆ ಮೈದಾನದಲ್ಲಿ ನಿರ್ಧಿಷ್ಟ ಸ್ಥಳಾವಕಾಶ ನೀಡಿ ವ್ಯಾಪಾರ ಮಾಡಿಕೊಡಲಾಗುವುದು. ಆ ಕಾರಣ ಫುಟ್ ಪಾತ್ ಅಂಗಡಿಗಳನ್ನು ತೆರವು ಮಾಡಲು ಸೂಚನೆ ನೀಡುವ ಕೆಲಸ ಪೊಲೀಸ್ ಸಹಕಾರದಲ್ಲಿ ಪಪಂ ಸಿಬ್ಬಂದಿಗಳು ನಡೆಸಿದರು.
ಬಸ್ ನಿಲ್ದಾಣದ ಪಕ್ಕದ ಎಪಿಎಂಸಿ ರಸ್ತೆ, ಎಂಜಿ ರಸ್ತೆ, ಹೆದ್ದಾರಿ ಬದಿ ಅಂಗಡಿ ತೆರವು ಮಾಡಲು ಹೇಳಿದೆ. ಈ ಜೊತೆ ಕೆಲ ಅಂಗಡಿಗಳು ತಮ್ಮ ವ್ಯಾಪಾರಕ್ಕೆ ಫುತ್ ಪಾತ್ ನಲ್ಲೇ ತಮ್ಮ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಈ ವಸ್ತು ಪ್ರದರ್ಶನ ನಿಲ್ಲಿಸಿ ತಮ್ಮ ಸೀಮಿತ ಅಂಗಡಿಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ತಿಳಿಸಿದರು.
ಮುನ್ಸಿಪಲ್ ಸಂಕೀರ್ಣದಲ್ಲಿ ಅಂಗಡಿ ಮಾಲೀಕರು ಈ ಸೂಚನೆಯನ್ನು ಒಪ್ಪದೇ ಮಾತಿನ ಚಕಮಕಿ ನಡೆಸಿದ ಘಟನೆ ಈ ವೇಳೆ ನಡೆಯಿತು. ಬಾಡಿಗೆದಾರರು ನಾವು ನಮ್ಮ ಅಂಗಡಿ ಮುಂದೆ ಇಟ್ಟ ವಸ್ತುಗಳನ್ನು ಒಳಗಿಟ್ಟು ವ್ಯವಹಾರ ಮಾಡಲು ಸಾಧ್ಯವಿಲ್ಲ. ಮೊದಲು ಪಾದಚಾರಿಗಳ ರಸ್ತೆಯಲ್ಲಿರುವ ತರಕಾರಿ, ಹಣ್ಣು ಹೂವು ಅಂಗಡಿ ತೆರವು ಮಾಡಿದ ಬಳಿಕ ನಾವು ನಿಮ್ಮ ಸೂಚನೆ ಒಪ್ಪುತ್ತೇವೆ ಎಂದು ವಾದಕ್ಕೆ ಇಳಿದರು. ಈ ಸಂದರ್ಭದಲ್ಲಿ ಪಿಎಸೈ ಮುತ್ತುರಾಜ್ ಹಾಗೂ ಸಿಬ್ಬಂದಿ ಮಧ್ಯ ಪ್ರವೇಶಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದರು.
ಜೀವನೋಪಾಯಕ್ಕೆ ರಸ್ತೆ ಬದಿ ವ್ಯಾಪಾರ ಮಾಡುತ್ತೇವೆ. ನಮಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಒಂದಡೆ ಸೇರಿಸಿದರೆ ವ್ಯಾಪಾರ ಮಾಡುತ್ತೇವೆ. ಯಾವುದೇ ಅನುಕೂಲವಿಲ್ಲದೆ ಸಂತೆ ಮೈದಾನಕ್ಕೆ ಸ್ಥಳಾಂತರ ಆಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬೀದಿ ಬದಿ ವ್ಯಾಪಾರಿಗಳು ಕೇಳಿದರು.
ಈಗಾಗಲೇ ಸ್ಥಳ ಗುರುತಿಸಿ ವ್ಯಾಪಾರಕ್ಕೆ ಅನುವು ಮಾಡಲಾಗಿದೆ. ನೀರು, ದೀಪ ವ್ಯವಸ್ಥೆ ಮಾಡಿದ್ದು, ಶಾಶ್ವತ ಮಾರುಕಟ್ಟೆ ಅಂಕಣ ಸಿದ್ದ ಪಡಿಸಲು ಕ್ರಿಯಾ ಯೋಜನೆ ಸಿದ್ಧವಿದೆ. ಪಟ್ಟಣ ಯೋಜನಾಧಿಕಾರಿಗಳಿಂದ ಸಮ್ಮತಿಗೆ ಕಾದಿದ್ದೇವೆ. ಹಣ್ಣು, ತರಕಾರಿ, ಹೂವು ಹೀಗೆ ಸ್ಟಾಲ್ ಹಾಕಿಕೊಳ್ಳಲು ಅವಕಾಶ ಮಾಡುತ್ತೇವೆ. ಸದ್ಯ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಸಂತೆ ಮೈದಾನಕ್ಕೆ ಬರಲು ಸೂಚನೆ ನೀಡುತ್ತಿದ್ದೇವೆ ಎಂದು ಮುಖ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.