ಗುಬ್ಬಿ: ಮಿದುಳು ಜ್ವರ ವೈರಸ್ ತಡೆಗೆ ಜೆಇ ಲಸಿಕೆಯನ್ನು ಒಂದು ವರ್ಷದ ಮಗುವಿನಿಂದ ಹದಿನೈದು ವರ್ಷದ ಮಕ್ಕಳಿಗೆ ಹಾಕುವ ಕಾರ್ಯಕ್ರಮಕ್ಕೆ ಗುಬ್ಬಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಕೇತಿಕ ಕಾರ್ಯಕ್ರಮದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಜೆಇ ಲಸಿಕೆ ಹಾಕುವ ಮೂಲಕ ಇಡೀ ತಾಲ್ಲೂಕಿನಲ್ಲಿ ಏಕಕಾಲದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೆದುಳು ಜ್ವರ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಬಹುಬೇಗ ಮೆದುಳು ನಿಷ್ಕ್ರಿಯೆಗೊಳ್ಳಲಿದೆ. ಜೀವಕ್ಕೆ ಅಪಾಯ ತರುವ ಈ ಮಾರಕ ರೋಗ ವಿಪರೀತ ತಲೆ ನೋವು, ಜ್ವರ, ವಾಂತಿ ಹೀಗೆ ಅನೇಕ ಲಕ್ಷಣ ಕಾಣುತ್ತದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ವಿವರಿಸಿದರು.
ತಾಲ್ಲೂಕಿನ ಒಟ್ಟು 50 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಇಂದು ಐದು ಸಾವಿರ ಮಕ್ಕಳಿಗೆ ವ್ಯಾಕ್ಸೀನ್ ನೀಡಲಾಯಿತು. ಒಟ್ಟು 928 ಲಸಿಕಾ ಕೇಂದ್ರ ತೆರೆದು 21 ವೈದ್ಯರ ನೇತೃತ್ವದಲ್ಲಿ 50 ಮಂದಿ ಸಿಬ್ಬಂದಿಗಳು ಜೊತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಹಾಕುವ ಕೆಲಸ ಮಾಡಲಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶಿರಸ್ತೇದಾರ್ ಶ್ರೀರಂಗ, ಬಿಇಓ ಸೋಮಶೇಖರ್, ಸಿಡಿಪಿಓ ಮಂಜುನಾಥ್, ಡಾ.ವಸುಧಾ, ಡಾ.ಅರ್ಯಸಹ, ತಾಲ್ಲೂಕು ಆರೋಗ್ಯ ನಿರೀಕ್ಷಕ ಜಯಣ್ಣ, ಪ್ರಾಚಾರ್ಯ ಎಂ.ಕೆಂ.ಮಂಜುನಾಥ್, ಅಧ್ಯಾಪಕರಾದ ದೇವಿಕಾ, ಜಯಣ್ಣ, ಭಡ್ರೆಗೌಡ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.