ಗುಬ್ಬಿ: ಪಟ್ಟಣದ ಜಲ ಮೂಲವಾಗಿದ್ದ ಮಾರನಕಟ್ಟೆ ಕೆರೆಯನ್ನು ಅನಧಿಕೃತವಾಗಿ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಪದವಿ ಕಾಲೇಜು ನಿರ್ಮಿಸಿ ಈಗ ಮಳೆ ನೀರು ಹಾಗೂ ಹಲವು ಬಡಾವಣೆಯ ಚರಂಡಿ ನೀರು ಸೇರಿಕೊಂಡು ಸಾಂಕ್ರಾಮಿಕ ರೋಗಗಳ ತಾಣವಾಗಿದೆ. ಜೊತೆಗೆ ನಿತ್ಯ ದುರ್ವಾಸನೆಯಿಂದ ವಿದ್ಯಾರ್ಥಿಗಳು ಪಾಠ ಕೇಳುವ ದುಸ್ಥಿತಿ ಬಂದೊದಗಿದೆ ಎಂದು ಕರುನಾಡ ವಿಜಯಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ವಿದ್ಯಾರ್ಥಿಗಳ ಜೊತೆ ಕುಳಿತ ಸಂಘಟನೆಯು ಕಾಲೇಜು ಸ್ಥಳಾಂತರ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಗುಬ್ಬಿಗೆ ಅಂತರ್ಜಲ ವೃದ್ಧಿಗೆ ಮಾರನಕಟ್ಟೆ ಕೆರೆ ಕಳೆದ ಮೂವತ್ತು ವರ್ಷಗಳ ಹಿಂದೆ ಸಂಪೂರ್ಣ ಕಬಳಿಕೆ ಮಾಡಿ ನಿವೇಶನಗಳಾಗಿ ವಿಂಗಡಿಸಿ ಸರ್ಕಾರಿ ಕಚೇರಿಗಳು, ಕಾಲೇಜು ನಿರ್ಮಾಣ ಮಾಡಲಾಯಿತು. ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ನಿರ್ಮಾಣವಾದ ಕಾಲೇಜು ಕಟ್ಟಡ ಅವೈಜ್ಞಾನಿಕವಾಗಿ ಸದ್ಯ ನಿರ್ಮಾಣವಾಗಿದೆ. ಕೆರೆಯ ಮಧ್ಯೆ ಕಟ್ಟಡ ದ್ವೀಪದಂತೆ ಕಂಡಿದೆ. ಮಳೆಗಾಲದಲ್ಲಿ ತುಂಬುವ ನೀರು ಬೇಸಿಗೆ ಕಾಲದವರೆಗೆ ನಿಂತ ನೀರಾಗಿ ಸಾಂಕ್ರಾಮಿಕ ರೋಗದ ಉಗಮಕ್ಕೆ ಕಾರಣವಾಗಲಿದೆ. ಈ ಜೊತೆಗೆ ಕೆರೆಯ ಸುತ್ತಲಿನ ಬಡಾವಣೆಯ ಚರಂಡಿ ನೀರು ಈ ಮಳೆ ನೀರಿಗೆ ಬೆರೆತು ನಿತ್ಯ ದುರ್ವಾಸನೆ ಅನುಭವಿಸುವಂತೆ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಕಿಡಿಕಾರಿದರು.
ಕೆರೆಯ ಸಂರಕ್ಷಣೆಗೆ ಒಂದು ವೇದಿಕೆ ಸೃಷ್ಟಿಸಿಕೊಂಡು ಕಾನೂನು ಹೋರಾಟ ನಡೆಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗಿದೆ. ಈ ಹೋರಾಟಕ್ಕೆ ಬೆನ್ನಲುಬಾಗಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ನಿಂತಿದ್ದಾರೆ. ಕಾನೂನು ಸೇವಾ ಪ್ರಾಧಿಕಾರ ಹಾಗೂ ಕೆರೆ ಸಂರಕ್ಷಣೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಕೆರೆ ಸಂರಕ್ಷಣೆಗೆ ತಾಲ್ಲೂಕು ಆಡಳಿತ ಮುಂದಾಗಲು ಸೂಚಿಸಿದೆ. ಆದರೂ ವಿಳಂಬ ಅನುಸರಿಸಿದ್ದು, ನಾವು ಹೈಕೋರ್ಟ್ ಮೂಲಕ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಜಿ.ಆರ್.ರಮೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಪ್ರವೀಣ್ ಗೌಡ, ಕರುನಾಡ ವಿಜಯಸೇನೆ ಪದಾಧಿಕಾರಿಗಳಾದ ಮಧು, ವಾಸು, ಯತೀಶ್, ಮೋಹನ್, ತೇಜು, ವಿಶ್ವಾಸ, ಮದನ್, ಯಶಸ್, ದರ್ಶನ, ನರಸಿಂಹಮೂರ್ತಿ ಇತರರು ಇದ್ದರು.