ಗುಬ್ಬಿ: ದಲಿತ ವಿರೋಧಿ ನೀತಿ ಮನದಲ್ಲಿಟ್ಟುಕೊಂಡ ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಾಯಲ್ಲಿಅಸ್ಪೃಶ್ಯ ಎಂಬ ಪದ ಬಳಕೆ ಅವರ ಜಾತೀಯತೆ ಎತ್ತಿಹಿಡಿದಿದೆ. ಈ ಮಾತು ಖಂಡನೀಯ. ಕೂಡಲೇ ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರಗತಿ ಪರ ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ದಲಿತ ಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದಲಿತ ವಿದ್ಯಾರ್ಥಿ ವೇತನ ರದ್ದು, ಉನ್ನತ ಶಿಕ್ಷಣ ಪಡೆಯುವ ದಲಿತರ ಹಾಸ್ಟೆಲ್ ರದ್ದು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ದೇವೇಗೌಡರು ಪ್ರಧಾನಿಯಾದರು. ಕುಮಾರಸ್ವಾಮಿ ಅವರು ಸಿಎಂ ಆದರು. ಅಂತಹ ಸಂವಿಧಾನ ರಚಿಸಿದ ಅಂಬೇಡ್ಕರ್ ಯಾರು ಎಂಬುದು ತಿಳಿದೂ ಹೀಗೆ ಅನುಚಿತ ಪದ ಬಳಕೆ ಸರಿಯಲ್ಲ. ಇಬ್ರಾಹಿಂ ಅವರನ್ನು ಸಿಎಂ ಯಾಕೆ ಆಗಬಾರದು ಎನ್ನುವ ಮಾತಿನ ಮಧ್ಯೆ ಅಸ್ಪೃಶ್ಯ ಎಂಬ ಪದ ಬಳಕೆ ಅವರ ಮನಸ್ಥಿತಿ ತೋರುತ್ತದೆ. ಮೇಲ್ನೋಟಕ್ಕೆ ಅಸ್ಪೃಶ್ಯತೆ ನಿವಾರಣೆ ಆಗಿದೆ ಎನ್ನುತ್ತಾ ಮಾನಸಿಕ ಅಸ್ಪೃಶ್ಯತೆ ಜೀವಂತ ಮಾಡಿದ್ದಾರೆ. ದಲಿತ ಸಿದ್ಧಪಡಿಸಿದ ಎಲ್ಲಾ ವಸ್ತುಗಳು ಬೇಕು. ಆದರೆ ದಲಿತರು ತಯಾರಿಸಿದ ಅಡುಗೆ ಮಾತ್ರ ಬೇಡ ಎನ್ನುವ ಇಂದಿನ ಸಮಾಜದಲ್ಲಿ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ರೀತಿ ಮಾತಾಡಬಾರದಿತ್ತು. ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಮುಖಂಡ ನಾಗರಾಜು ಮಾತನಾಡಿ ಜೆಡಿಎಸ್ ಪಕ್ಷ ದಲಿತರ ಪರ ಎಂದು ತಿಳಿದು ಕಳೆದ ಹದಿನೈದು ವರ್ಷಗಳಿಂದ ಮತ ನೀಡಿದ್ದೇವೆ. ಆದರೆ ಕುಮಾರಣ್ಣ ಅವರ ಬಾಯಲ್ಲಿ ಇಂತಹ ಮಾತು ಬಂದಿದ್ದು ದಲಿತ ವಿರೋಧಿತನ ತೋರುತ್ತಿದೆ. ಕೂಡಲೇ ಕ್ಷಮೆ ಕೇಳಿ ಬಳಕೆ ಮಾಡಿದ ಪದ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಚುನಾವಣೆಯಲ್ಲಿ ನಿರ್ಣಾಯಕರಾದ ನಾವುಗಳು ತಕ್ಕ ಉತ್ತರ ನೀಡುತ್ತೇವೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅಳವಡಿಸಿಕೊಂಡಿದೆ. ಹೈಸ್ಕೂಲ್ ಓದುವ ಬಡ ದಲಿತ ಮಕ್ಕಳ ವಿದ್ಯಾರ್ಥಿ ವೇತನ ರದ್ದು ಮಾಡಿದ್ದು ಖಂಡನೀಯ. ಈ ಜೊತೆಗೆ ಉನ್ನತ ವ್ಯಾಸಂಗ ಮಾಡುವ ದಲಿತ ಮಕ್ಕಳ ಹಾಸ್ಟೆಲ್ ರದ್ದು ಮಾಡುವಲ್ಲಿ ತಿಳಿಯುತ್ತದೆ. ಇದು ಪೂರ್ವ ನಿಯೋಜಿತ ಹುನ್ನಾರ. ದಲಿತ ಶಿಕ್ಷಣ ಹಕ್ಕು ಕಸಿಯುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಚುನಾವಣೆಯಲ್ಲಿ ತೋರುತ್ತವೆ ಎಂದು ಕಿಡಿಕಾರಿದರು.
ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ದಲಿತ ವಿರೋಧಿ ಪದ ಬಳಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಮುಖಂಡ ಕೊಡಿಯಾಲ ಮಹದೇವು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚೇಳೂರು ಶಿವನಂಜಪ್ಪ, ಜಿ.ವಿ.ಮಂಜುನಾಥ್, ದೊಡ್ಡಯ್ಯ, ನಾಗಭೂಷಣ್, ಶಿವಪ್ಪ, ಚನ್ನಬಸವಯ್ಯ, ದಲಿತ್ ಗಂಗಣ್ಣ, ಬೆಟ್ಟಸ್ವಾಮಿ, ನಾಗರಾಜು, ಸತೀಶ್ ಕೃಷ್ಣಪ್ಪ ಇತರರು ಇದ್ದರು.