ಬಡವರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರಕಬೇಕು ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು: ಹೃದಯದ ನಂತರ ಮನುಷ್ಯನ ದೇಹದಲ್ಲಿ ಪ್ರಮುಖ ಅಂಗ ಕಣ್ಣು. ಕಣ್ಣಿನಿಂದ ಕೇವಲ ನೋಟ ಅಷ್ಟೇ ಅಲ್ಲ, ಜ್ಞಾನವೂ ಸಹ ಲಭಿಸುತ್ತದೆ. ಕಣ್ಣು ಇಲ್ಲದಿದ್ದರೆ ಶಿಕ್ಷಣ, ಸಾಹಿತ್ಯ ಸಿಗುತ್ತಿರಲಿಲ್ಲ. ಶಿಕ್ಷಣ ಸಾಹಿತ್ಯ ಇಲ್ಲದಿದ್ದರೆ ಸುಸಂಸ್ಕೃತವಾದ ಸಮಾಜವೂ ಸಹ ನಿರ್ಮಾಣವಾಗುತ್ತಿರಲಿಲ್ಲ. ದೇವರ ಸೃಷ್ಠಿಯಲ್ಲಿ ಕಣ್ಣು ಅತ್ಯಂತ ಅವಶ್ಯಕತೆಯಿರುವ ಅಂಗವಾಗಿದ್ದು, ನಮ್ಮ ಸರ್ಕಾರ ಕಣ್ಣಿನ ರೋಗಗಳಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅನುಷ್ಟಾನಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರಿಂದು ತುಮಕೂರು ನಗರದಲ್ಲಿ ನಾರಾಯಣ ದೇವಾಲಯ- ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಕಣ್ಣಿನ ಚಟುವಟಿಕೆ ಅತ್ಯಂತ ಸೂಕ್ಷವಾದದ್ದು. ವಯಸ್ಸಾದಂತೆ ಹಲವಾರು ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂದಿನ ದಿನಗಳಲ್ಲಿ ಕಣ್ಣಿಗೆ ಬರುವಂತಹ ಆಪತ್ತುಗಳನ್ನು ನಿವಾರಣೆ ಮಾಡುವಂತಹ ಅನೇಕ ತಂತ್ರಜ್ಞಾನಗಳು ದೊಡ್ಡ ಪ್ರಮಾಣದಲ್ಲಿ ಇಂದು ಜಗತ್ತಿನಾದ್ಯಂತ ಬೆಳೆದಿದೆ ಎಂದರು.

ಇಂದು ವೈದ್ಯಕೀಯ ಕ್ಷೇತ್ರದ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಬಡವರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವುದಾಗಿದೆ. ಇಂದು ವೈದ್ಯಕೀಯ ಕ್ಷೇತ್ರ ಅತ್ಯಂತ ದುಬಾರಿಯಾಗಿದ್ದು, ಗುಣಮಟ್ಟದ ಆರೋಗ್ಯ ಚಿಕಿತ್ಸೆ ನೀಡಲು ಅತ್ಯಂತ ದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ. ಬಡವರು ಉತ್ತಮ ವೈದ್ಯಕೀಯ ಸೇವೆಯನ್ನು ಪಡೆಯುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದಾಗಿ ಬಡವರಿಗೆ 5 ಲಕ್ಷ ರೂ.ಗಳ ವರೆಗೆ ಉಚಿತ ವೈದ್ಯಕೀಯ ಸೇವೆ ದೊರೆಯಲಿದ್ದು, ಈ ರಾಜ್ಯದಲ್ಲಿ ಸುಮಾರು 5 ಕೋಟಿ ಕಾರ್ಡ್‌ಗಳನ್ನು ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 1 ಕೋಟಿ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು.

ಬಡವರಿಗಾಗಿ ಕೈಗೆಟಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುವ ಸಂಬಂಧ ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ಎಲ್ಲಾ ವೈದ್ಯಕೀಯ ಕ್ಷೇತ್ರದ ಉದ್ಯಮಿಗಳು ಮತ್ತು ಆಸ್ಪತ್ರೆಯ ಮಾಲೀಕರುಗಳಿಗೆ ಮುಖ್ಯಮಂತ್ರಿಗಳು ಈ ಸಂದರ್ಭ ಕರೆ ನೀಡಿದರು.

60 ವರ್ಷ ಮೇಲ್ಪಟ್ಟವರಿಗೆ ಕ್ಯಾಟರಕ್ಟ್ ಸೇರಿದಂತೆ ಇನ್ಯಾವುದೇ ಕಣ್ಣಿನ ರೋಗವಿರಲಿ ಅಂತಹವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತ್ತು ಕನ್ನಡಕ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಯೋಜನೆ ಜನವರಿ ಮಾಹೆಯಲ್ಲಿ ಜಾರಿಗೆ ಬರಲಿದೆ. ಈ ಯೋಜನೆಯು ಬೇರೆ ಯಾವುದೇ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದೇ ರೀತಿ ಹುಟ್ಟು ಕಿವುಡು ಇದ್ದಂತಹವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸಾಧನದ ಅವಶ್ಯಕತೆ ಇದ್ದು, ಈ ಸಾಧನ ಅಳವಡಿಸಲು ೫ ರಿಂದ ೨೦ ಲಕ್ಷ ರೂ.ಗಳ ಬೇಕಾಗುತ್ತದೆ. ಇದಕ್ಕಾಗಿ ಈ ವರ್ಷ ೫೦೦ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ಅಳವಡಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಡಯಾಲಿಸಿಸ್ ಸೈಕಲ್ ಅನ್ನು ಪ್ರತಿ ದಿನ 3೦೦೦೦ ಮಾಡಲಾಗುತ್ತಿದ್ದು, ಅದನ್ನು 6೦೦೦೦ ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬಹಳಷ್ಟು ಜನಕ್ಕೆ ಅನುಕೂಲವಾಗಲಿದೆ. ಅದೇ ರೀತಿ ಕ್ಯಾನ್ಸ್‌ರ್ ಟ್ರೀಟ್‌ಮೆಂಟ್‌ಗೆ 12 ಹೊಸ ಸೆಂಟರ್‌ಗಳನ್ನು ತೆರೆದು ಕಿಮೋತೆರಫಿ ಸೈಕಲ್‌ಗಳನ್ನು ಹೆಚ್ಚಿಸಲಾಗಿದೆ. ಪ್ರತಿಯೊಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರೈಮರಿ ಮತ್ತು ಸೆಕೆಂಡರಿ ಆರೋಗ್ಯ ಕೇಂದ್ರಗಳಲ್ಲಿ ಜನರಲ್ ಚೆಕಪ್ ಮಾಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸುಮಾರು 1೦೦ ಪಿಹೆಚ್‌ಸಿ ಸೆಂಟರ್‌ಗಳನ್ನು ಸಿಹೆಚ್‌ಸಿ ಸೆಂಟರ್‌ಗಳಾಗಿ ತಲಾ 1೦ ಕೋಟಿ ರೂ.ಗಳನ್ನು ನೀಡಿ ಮೇಲ್ದರ್ಜೆಗೇರಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಮೂಲ ಸೌಕರ್ಯ ಉತ್ತಮಗೊಳ್ಳಬೇಕು ಮತ್ತು ಈ ಮೂಲಕ ಸರ್ವರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ದೊರಕುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲಾ ಕೆಲಸಗಳನ್ನೂ ಮಾಡುತ್ತಿದೆ ಎಂದರು. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಕಣ್ಣಿನ ರೋಗ ಮತ್ತು ಕುರುಡುತನ ಮಕ್ಕಳಲ್ಲಿ ಬರುವಂತಹದ್ದು ಅಪೌಷ್ಠಿಕತೆಯಿಂದ. ಆದುದರಿಂದ ಪೌಷ್ಠಿಕ ಆಹಾರ ಮತ್ತು ಔಷಧಿ ನೀಡುವ ಮೂಲಕ ಮಕ್ಕಳಲ್ಲಿ ಕಣ್ಣಿನ ರೋಗವನ್ನು ತಡೆಯುವಂತಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ ಎಂದರು.

ಡಾ: ಭುಜಂಗಶೆಟ್ಟಿ ಅವರು ಕಳೆದ 25 ವರ್ಷಗಳಿಂದ ಕಣ್ಣಿನ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಬಹಳ ದೊಡ್ಡ ಪ್ರಮಾಣದ್ದು. ಕಣ್ಣಿನ ದಾನದಂತಹ ಆಂದೋಲನವನ್ನು ಪ್ರಾರಂಭಿಸಿದ ಅವರೇ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ತುಮಕೂರಿನಲ್ಲಿ ಪ್ರಾರಂಭಿಸಲಾಗಿರುವ ನಾರಾಯಣ ದೇವಾಲಯವು ಶೇ.1೦೦ರಷ್ಟು ಉಚಿತ ಕಣ್ಣಿನ ಚಿಕಿತ್ಸೆ ನೀಡುವ ಕೇಂದ್ರವಾಗಿರುತ್ತದೆ. ಇಂತಹ ಆಸ್ಪತ್ರೆ ಕರ್ನಾಟಕದ ಬೇರೆಲ್ಲಿಯೂ ಇಲ್ಲ ಎಂಬುದು ನನ್ನ ಭಾವನೆ. ಅತ್ಯಂತ ಕ್ಲಿಷ್ಟವಾದ ಕಣ್ಣಿನ ರೋಗಗಳನ್ನು ನಿವಾರಣೆ ಮಾಡುವಂತಹ ಅತ್ಯಾಧುನಿಕ ವ್ಯವಸ್ಥೆ ಇದಾಗಿದೆ. ಡಾ: ಭುಜಂಗಶೆಟ್ಟಿ ಅವರ ಈ ತೀರ್ಮಾನ ಎಲ್ಲರಿಗೂ ಮಾದರಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕೆಂದು ಕರೆ ನೀಡಿದರು.

ನಾರಾಯಣ ನೇತ್ರಾಲಯದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ. ಭುಜಂಗ ಶೆಟ್ಟಿ ಮಾತನಾಡಿದರು. ನಾರಾಯಣ ದೇವಾಲಯ ತಂದೆಯ ನೆನಪಿಗಾಗಿ ತೆರೆದ ಆಸ್ಪತ್ರೆಯಾಗಿದ್ದು, ಬಡವರಿಗೆ ಉಚಿತವಾಗಿ ಅತ್ಯತ್ತಮ ಚಿಕಿತ್ಸೆ ನೀಡಲು ನಿರ್ಧಾರ ಮಾಡಿ ನಾರಾಯಣ ದೇವಾಲಯ (ಉಚಿತ ನೇತ್ರ ಚಿಕಿತ್ಸಾ ಕೇಂದ್ರ) ಸ್ಥಾಪಿಸಲಾಗಿದೆ, ಇದೇ ಮಾದರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಬೇಕೆಂಬ ಗುರಿ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಸಚಿವರುಗಳಾದ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ. ಸೋಮಶೇಖರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಾಸಕ ರಾಜೇಶ್‌ಗೌಡ, ಸ್ಥಳೀಯ ಜನಪ್ರತಿನಿಧಿಗಳು, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!