.
ಗುಬ್ಬಿ: ಪಂಚರತ್ನ ರಥಯಾತ್ರೆ ಪ್ರಚಾರಕ್ಕೆ ಗುಬ್ಬಿ ಕ್ಷೇತ್ರಕ್ಕೆ ಆಗಮಿಸಿದ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಳಿಲು ಘಟ್ಟ ಗ್ರಾಮದಲ್ಲಿ ಸೂರು ಕಳೆದುಕೊಂಡ ನಿರಾಶ್ರಿತೆ ವೃದ್ದೆ ನಾಗಮ್ಮ ಅವರ ಮನೆಯ ವಸ್ತು ಸ್ಥಿತಿ ಗಮನಿಸಿ ಕೂಡಲೇ ಒಂದು ಲಕ್ಷ ರೂ ಸಹಾಯ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸಂತ್ರಸ್ತೆ ಮಹಿಳೆ ನಾಗಮ್ಮ ಎಂಬ ವೃದ್ದೆಗೆ ಇಂದು ಒಂದು ಲಕ್ಷ ನಗದು ರೂಪದಲ್ಲಿ ನೆರವು ನೀಡಲಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಂಕಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲು ತೆರಳಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕುಮಾರಣ್ಣ ಅವರನ್ನು ಭೇಟಿ ಮಾಡಿದ ಸಂತ್ರಸ್ತ ಮಹಿಳೆ ನಾಗಮ್ಮ ವಸತಿ ಯೋಜನೆಯನ್ನು ನೀಡದ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನಲೆ ಖುದ್ದು ಕುಮಾರಣ್ಣ ಅವರ ಮನೆಗೆ ಭೇಟಿ ನೀಡಿ ಕೇವಲ ಒಂದು ಶೀಟ್ ಕೆಳಗೆ ಬದುಕು ಕಟ್ಟಕೊಂಡ ವೃದ್ಧೆಯ ದುಸ್ಥಿತಿ ಕಂಡು ತಕ್ಷಣ ಆರ್ಥಿಕ ನೆರವು ಭರವಸೆ ನೀಡಿದ್ದರು.
ಈ ಹಿಂದೆ ಹೊಸಕೆರೆ ಅಳಿಲುಘಟ್ಟ ಗ್ರಾಮದ ಮಧ್ಯೆ ಭೂಕಂಪದ ಕೇಂದ್ರ ಬಿಂದು ಬಗ್ಗೆ ಇಸ್ರೋ ವಿಜ್ಞಾನಿಗಳು ಗುರುತು ಮಾಡಿದ ಸ್ಥಳದಲ್ಲೇ ಈ ಸಂತ್ರಸ್ತೆ ನಾಗಮ್ಮ ಅವರ ಮನೆ ಇದ್ದು ಮನೆ ಬಿರುಕು ಬಿಟ್ಟಿತ್ತು. ಆದರೆ ಈ ಬಾರಿ ಸುರಿದ ಬಾರಿ ಮಳೆಯಿಂದ ವೃದ್ಧೆಯ ಮನೆ ಸಂಪೂರ್ಣ ನೆಲಕಚ್ಚಿ ಕೇವಲ ಒಂದು ಶೀಟ್ ನೆರವಿನಲ್ಲಿ ಬದುಕು ನಡೆಸಿದ್ದರು. ಲಿಂಗಾಯಿತ ಸಮುದಾಯದ ಈ ವೃದ್ದೆ ನಾಗಮ್ಮ ಅವರಿಗೆ ಯಾವುದೇ ಸಹಾಯ ಸಿಗದ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬರುವಿಕೆ ತಿಳಿದು ಅವರ ಬಳಿ ತಮ್ಮ ಸಂಕಷ್ಟ ವಿವರಿಸಿದ್ದರು. ಆರ್ಥಿಕ ನೆರವು ಜೊತೆ ನಮ್ಮ ಪಕ್ಷ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ನಿರಾಶ್ರಿತ ನಾಗಮ್ಮ ಅವರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಪಂಚರತ್ನ ಯಾತ್ರೆಗೆ ಗುಬ್ಬಿ ಕ್ಷೇತ್ರದಲ್ಲಿ ಅಭೂತ ಪೂರ್ವ ಯಶಸ್ವಿ ಸಿಕ್ಕಿದೆ. ಮತದಾರರು ಸಹ ಸಾಮಾಜಿಕ ಕಳಕಳಿಯ ಯೋಜನೆ ಬಗ್ಗೆ ಆಕರ್ಷಿತರಾದರು. ಕ್ಷೇತ್ರದ ಕೆ.ಜಿ ಟೆಂಪಲ್, ಕಡಬ, ನಿಟ್ಟೂರು, ಹೊಸಕೆರೆ, ಹಾಗಲವಾಡಿ ಹಾಗೂ ಚೇಳೂರು ಗ್ರಾಮದಲ್ಲಿ ರಾತ್ರಿ ಕಾದು ಕುಮಾರಣ್ಣ ಅವರನ್ನು ಸ್ವಾಗತ ಮಾಡಿದ್ದಾರೆ. ಇವರ ಗ್ರಾಮ ವಾಸ್ತವ್ಯ ಬಹಳ ಪರಿಣಾಮಕಾರಿಯಾಗಿ ಕಂಡು ಬಂದ ಹಿನ್ನಲೆ ನಾನು ಕೂಡಾ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಹೂಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದೇನೆ ಎಂದರು.
ಪಂಚರತ್ನ ಪ್ರಚಾರಕ್ಕೆ ಮಾತ್ರ ಬಂದ ಕುಮಾರಣ್ಣ ಯಾರನ್ನು ಗುರಿಯಾಗಿಸಿಕೊಂಡು ಮಾತನಾಡಲು ಬಂದಿಲ್ಲ. ಕೇವಲ ಮಹತ್ವಾಕಾಂಕ್ಷೆಯ ಯೋಜನೆಯ ಮನವರಿಕೆ ಮಾಡಿ ಮತಯಾಚನೆ ಮಾಡಲು ಬಂದಿದ್ದಾರೆ. ರಾಜ್ಯದ ಉದ್ದಗಲಕ್ಕೂ ಜೆಡಿಎಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುವ ಕೆಲಸದ ಮಧ್ಯೆ ಒಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಅಗತ್ಯವಿಲ್ಲ. ಜೆಡಿಎಸ್ ಜನ ಮಾನಸದಲ್ಲಿ ಬಂದಿದೆ. ಮುಂದಿನ ಸಿಎಂ ಕುಮಾರಣ್ಣ ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು 19 ದಿನದ ಈ ಯಾತ್ರೆ ಜನರ ಮನ ಗೆದ್ದಿದೆ. ಗ್ರಾಮ ವಾಸ್ತವ್ಯ ಸಹ ಸಾಕಷ್ಟು ಜನರ ಕಷ್ಟ ನಿವಾರಣೆಗೆ ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿ ಗುಬ್ಬಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಗೆ ಸಹಕರಿಸಿದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಂಗಸಂದ್ರ ಮಂಜಣ್ಣ, ಗಂಗಾಧರ್, ಡಿ.ರಘು, ಸಂತ್ರಸ್ತೆ ನಾಗಮ್ಮ, ಚೂಡಾಮಣಿ, ಲತಾ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.