ಚುನಾವಣಾ ಕಣದಿಂದ ಹಿಂದೆ ಸರಿಯದೆ ಉಳಿದು ನಿಮ್ಮ ತಾಕತ್ತು ತೋರಿಸಿ ಪ್ರಸನ್ನಕುಮಾರ್

.

ಗುಬ್ಬಿ: ಪಾರ್ಟಿ ಫಂಡ್ ಗಾಗಿ ಬಂದು ಕಾಂಗ್ರೆಸ್ ಟಿಕೆಟ್ ಕೇಳುವ ಪ್ರಸನ್ನಕುಮಾರ್ ಅವರು ಯಾವುದೇ ಚುನಾವಣೆ ಎದುರಿಸುವ ತಾಕತ್ತು ಇಲ್ಲ. ನಿಮ್ಮಲ್ಲಿ ಕಿಚ್ಚು ಇದ್ದಲ್ಲಿ ಮೊದಲು ವಿಧಾನಸಭಾ ಚುನಾವಣಾ ಕಣದಲ್ಲಿ ಉಳಿದು ನಿಮ್ಮ ಶಕ್ತಿ ಪ್ರದರ್ಶನ ಮಾಡಿ ಎಂದು ವಾಸಣ್ಣ ಅಭಿಮಾನಿ ಬಳಗದ ದಲಿತ ಮುಖಂಡ ಕೊಡಿಯಾಲ ಮಹದೇವು ಚಾಲೆಂಜ್ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಾಸಣ್ಣ ಅಭಿಮಾನಿಗಳ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸಂಘಟನೆ ಮಾಡುವ ಕೆಲಸ ಎಂದೂ ಮಾಡದೆ ಚುನಾವಣೆ ಟಿಕೆಟ್ ಕೇಳಿರುವ ಇಬ್ಬರು ಪೊಳ್ಳು ಮುಖಂಡರು ಒಂದೇ ನಾಣ್ಯದ ಎರಡು ಮುಖದವರು. ಬಿಜೆಪಿಯ ಬಿ ಟೀಂ ಆಗಿ ಪ್ರಸನ್ನಕುಮಾರ್ ಹಾಗೂ ಜೆಡಿಎಸ್ ಬಿ ಟೀಂ ಆಗಿ ಹೊನ್ನಗಿರಿಗೌಡ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಬಡ ಬಗ್ಗರ ಹಣ ಲೂಟಿ ಮಾಡಿರುವ ಪ್ರಸನ್ನಕುಮಾರ್ ನಿಮಗೆ ನೈತಿಕತೆ ಇದ್ದರೆ ಮೊದಲು ವಾಸಣ್ಣ ಅಭಿಮಾನಿಗಳಿಗೆ ಉತ್ತರ ನೀಡಿ. ಕ್ಷೇತ್ರ ಸುತ್ತಿದ್ದರೆ ಅಭಿವೃದ್ದಿ ಬಗ್ಗೆ ನಿಮಗೆ ತಿಳಿಯುತ್ತಿತ್ತು. ಕಾಂಗ್ರೆಸ್ ಟಿಕೆಟ್ ಕೇಳಿರುವ ಇಬ್ಬರೂ ಮುಖಂಡರು ಸಾಮಾನ್ಯ ಕಾರ್ಯಕರ್ತನಾದ ನನ್ನ ವಿರುದ್ದ ನಿಂತು ಗೆಲುವು ಸಾಧಿಸಿ ನೋಡೋಣ ಎಂದು ಸವಾಲೆಸೆದ ಅವರು ದಲಿತ ಸಮುದಾಯವನ್ನು ಎಂದಾದರೂ ನೀವು ನಿಮ್ಮ ದೊಡ್ಡಪ್ಪ ಸಂಸದರು ಒಪ್ಪಿದ್ದಾರೆಯೇ ಹೇಳಿ. ಸಂಸದರ ಮನೆಗೆ ದಲಿತರ ಪ್ರವೇಶಕ್ಕೆ ಅವಕಾಶ ಇದೆಯೇ ಹೇಳಿ ಪ್ರಸನ್ನ ಅವರೇ ಎಂದು ನೇರ ಪ್ರಶ್ನಿಸಿ ವಾಸಣ್ಣನವರ ಮನೆಗೆ ಬಂದು ನೋಡಿ ದಲಿತರಿಗೆ ಎಲ್ಲಾ ಆತಿಥ್ಯ ಅಲ್ಲಿ ಸಿಗುತ್ತಿದೆ ಎಂದು ಪ್ರಸನ್ನಕುಮಾರ್ ಅವರನ್ನು ನೇರ ಟೀಕೆ ಮಾಡಿದರು.

ಮನ ಬಂದಂತೆ ಮಾತನಾಡುವ ಪ್ರಸನ್ನ ಅವರ ತಾಯಿ ಊರು ಶಿವನೇಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತ ಹಾಕಿಸಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹೊನ್ನಗಿರಿಗೌಡ ಹಾಗೂ ಬಾಲಾಜಿ ಕುಮಾರ್ ಅವರಿಗೆ ತಮ್ಮ ಕೊಡುಗೆ ಏನು ಹೇಳಿ. ನಮ್ಮ ಶಾಸಕರ ಸಾಮರ್ಥ್ಯ ತಿಳಿದೇ ಕಾಂಗ್ರೆಸ್ ಆಹ್ವಾನ ನೀಡಿದೆ. ಯಾವುದೇ ಪಕ್ಷದಲ್ಲಿ ಅಥವಾ ಪಕ್ಷೇತರ ನಿಂತರೂ ಗೆಲುವು ಶಕ್ತಿ ಅವರಲ್ಲಿದೆ. ಅಂತಹ ತಾಕತ್ತು ನಿಮ್ಮಲ್ಲಿದ್ದರೆ ಕಣದಲ್ಲಿ ಉಳಿದು ಸ್ಪರ್ಧೆ ಮಾಡಿ ಎಂದು ಸವಾಲು ಹಾಕಿದ ಅವರು ಪಕ್ಷದ ಬಗ್ಗೆ ಮಾತನಾಡುವ ನೀವುಗಳು ವಲಸೆ ಬಂದವರು. ಶಾಸಕರ ತಂದೆ ಮೂಲ ಕಾಂಗ್ರೆಸಿಗರು ಎಂಬುದು ಮರೆಯಬೇಡಿ ಎಂದರು.

ಮುಖಂಡ ಚನ್ನಬಸವಯ್ಯ ಮಾತನಾಡಿ ಗುಬ್ಬಿ ಶಾಸಕರ ಬಗ್ಗೆ ಮಾತನಾಡುವ ಅರ್ಹತೆ ಪ್ರಸನ್ನಕುಮಾರ್ ಹಾಗೂ ಹೊನ್ನಗಿರಿಗೌಡ ಅವರಿಗಿಲ್ಲ. ಕಾಂಗ್ರೆಸ್ ಆಗಲಿ ಬೇರೆ ಪಕ್ಷವಾಗಲಿ ಟಿಕೆಟ್ ಪಡೆದು ಚುನಾವಣೆ ಎದುರಿಸಿ ಸಾಧ್ಯವಾಗದಿದ್ದರೆ ಸ್ವತಂತ್ರ ನಿಂತು ನಿಮ್ಮ ದಮ್ಮು ತಾಕತ್ತು ತೋರಿಸಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸದಾ ಸಾರ್ವಜನಿಕರ ನಡುವೆ ಕೆಲಸ ಮಾಡುವ ಏಕೈಕ ಶಾಸಕರು ನಮ್ಮ ವಾಸಣ್ಣ. ನಿತ್ಯ ನೂರಾರು ಜನರ ಸಮಸ್ಯೆ ಬಗೆಹರಿಸುತ್ತಾರೆ. ಗುಬ್ಬಿ ಕ್ಷೇತ್ರದ ನಿವಾಸಿ ಅಲ್ಲದ ನೀವು ಅವರ ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಿ ಮಾತನಾಡಿ. ಯಾರೋ ಹೇಳಿಕೊಟ್ಟ ಮಾತು ಮಾಧ್ಯಮದ ಮುಂದೆ ಹೇಳಬೇಡಿ. ನವರಂಗಿ ಆಟ, ಡೋಂಗಿತನ ಮಾತು ಬಿಟ್ಟು ಚುನಾವಣೆ ಕಣದಲ್ಲಿ ಉಳಿಯುವ ಮೂಲಕ ನಿಮ್ಮ ಶಕ್ತಿ ತೋರಿಸಿ. ಸೋಲು ಗೆಲುವು ಮತದಾರರು ನಿರ್ಧರಿಸುತ್ತಾರೆ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರಯ್ಯ, ಶಿವಪ್ಪ, ಸೀನಪ್ಪ, ನಾಗರಾಜು, ಶ್ರೀನಿವಾಸ್, ರಂಗಧಾಮು, ಕೃಷ್ಣಪ್ಪ, ಕಲ್ಲೇಶ್, ನಾಗರಾಜು, ಬಸವರಾಜು, ಸತೀಶ್, ಯತೀಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!