ಗುಬ್ಬಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಹೋರಾಟ ಸಂದರ್ಭದಲ್ಲಿ ಹಲವು ಹೋರಾಟಗಾರರನ್ನು ಬಂಧಿಸಿದ ಪೊಲೀಸರು ಹಾಗೂ ಸರ್ಕಾರದ ಧೋರಣೆ ಖಂಡಿಸಿ ಗುಬ್ಬಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದ ತಾಲ್ಲೂಕು ದಸಂಸ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ನ್ಯಾಯವಾದ ಹೋರಾಟ ನಡೆಸಿ ಹಕ್ಕು ಪ್ರತಿಪಾದಿಸಿದ ದಲಿತ ಮುಖಂಡರನ್ನು ಬಂಧಿಸಿದ ಪೊಲೀಸರ ದೌರ್ಜನ್ಯ ಖಂಡನೀಯ. ಈ ಮಟ್ಟದ ದಲಿತ ವಿರೋಧಿ ನೀತಿ ಪಾಲಿಸುವ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಈಶ್ವರಯ್ಯ ಹಕ್ಕು ಕೇಳಿದರೆ ನಮ್ಮ ಮೇಲೆ ಪೊಲೀಸರನ್ನು ಬಿಟ್ಟು ಹಲ್ಲೆ ಮಾಡಿಸಿ ಕೆಲವರನ್ನು ಬಂಧಿಸಿರುವುದು ಖಂಡನೀಯ. ನ್ಯಾಯ ಕೇಳಲು ಹೋರಾಟ ಮಾರ್ಗ ಸಂವಿಧಾನದಲ್ಲಿದೆ. ಅದೊಂದೇ ಮಾರ್ಗ ಅಂಬೇಡ್ಕರ್ ಅವರು ನಮಗೆ ನೀಡಿದ ಅಸ್ತ್ರ. ಅದು ಶಾಂತಿಯುತ, ಬಹು ವರ್ಷದ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಪೊಲೀಸರನ್ನು ಮುಂದಿಟ್ಟು ನಡೆಸಿದೆ. ಕೂಡಲೇ ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡಿ ಅವರ ಹಲ್ಲೆಗೆ ಒಳಗಾದವರ ಚಿಕಿತ್ಸೆ ವೆಚ್ಚ ಭರಿಸಬೇಕು. ಈ ಎಲ್ಲದಕ್ಕೂ ಮೊದಲು ನಮ್ಮ ಹಕ್ಕು ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಎನ್.ಎ.ನಾಗರಾಜು ಮಾತನಾಡಿ ದಲಿತರ ಪರ ನಿಲ್ಲಬೇಕಾದ ಸರ್ಕಾರ ನಮ್ಮಗಳ ಮೇಲೆ ದೌರ್ಜನ್ಯ ತೋರಿದೆ. ಒಳ ಮೀಸಲಾತಿ ಬಗ್ಗೆ ಒತ್ತಾಯಿಸಿದರೆ ರಾಜ್ಯದ ನಾನಾ ಭಾಗಗಳಿಂದ ಬಂದ ಹೋರಾಟಗಾರರಿಗೆ ಲಾಠಿ ರುಚಿ ತೋರುವ ಕಟುಕತನ ತೋರಿದ ಸರ್ಕಾರಕ್ಕೆ ಎಚ್ಚರಿಕೆ ಪಾಠ ಮುಂದಿನ ಚುನಾವಣೆಯಲ್ಲಿ ತೋರುತ್ತವೆ. ಹರಿಹರದಿಂದ ಪಾದಯಾತ್ರೆ ಮೂಲಕ ಬೆಂಗಳೂರಿಗೆ ಬಂದ ಸಾವಿರಾರು ದಲಿತರ ಒತ್ತಾಯವನ್ನು ಮುಖ್ಯಮಂತ್ರಿಗಳೇ ಅಲಿಸಲಿ ಎಂಬ ನಮ್ಮ ಒತ್ತಾಯಕ್ಕೆ ಪೊಲೀಸರಿಂದ ಉತ್ತರ ನೀಡಿದ ಬಿಜೆಪಿ ಸರ್ಕಾರಕ್ಕೆ ದಲಿತರು ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಮುಖಂಡರಾದ ಕಿಟ್ಟದಕುಪ್ಪೆ ನಾಗರಾಜು ಹಾಗೂ ಹರುವೆಸಂದ್ರ ಕೃಷ್ಣಪ್ಪ ಮಾತನಾಡಿ ದಲಿತರ ಸಮಸ್ಯೆ, ಹಕೋತ್ತಾಯ ಆಲಿಸಬೇಕಾದ ಬಿಜೆಪಿ ಸರ್ಕಾರ ನಮ್ಮನ್ನು ಕಡೆಗಣಿಸಿ ಪೊಲೀಸರ ಬೆದರಿಕೆಯೊಡ್ಡಿದೆ. ಇದಕ್ಕೆ ತಕ್ಕ ಉತ್ತರ ಮುಂದಿನ ದಿನ ಮತ ಭಿಕ್ಷೆಗೆ ನಮ್ಮಗಳ ಕಾಲೋನಿಗೆ ಬರುವ ಬಿಜೆಪಿ ಪಕ್ಷದವರಿಗೆ ಕಸ ಪೊರಕೆ ಪೂಜೆ ನೆರವೇರಲಿದೆ. ನಿರ್ಣಾಯಕ ದಲಿತ ಮತಗಳು ಬಿಜೆಪಿ ಹೊರತಾಗಿ ಚಲಾವಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನಂತರ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಬೇಡಿಕೆ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ನಟರಾಜು, ದೊಡ್ಡಯ್ಯ, ನಾಗಭೂಷಣ್, ದಲಿತ್ ಕುಮಾರ್, ಶಂಕರ್, ರವಿಕುಮಾರ್, ಅಜಯ್, ಅನಿಲ್ ಕುಮಾರ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.