ರೈತ ಸಂಘದ ರಾಜ್ಯ ಉಪಾಧ್ಯಕ್ಷರ ಸ್ವಗ್ರಾಮದಲ್ಲೇ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ : ರಾಜಕಾರಣ ದ್ವೇಷಕ್ಕೆ ಈ ಕೃತ್ಯ ರೈತರ ಆರೋಪ

ಗುಬ್ಬಿ: ಕಳೆದ ಮೂವತ್ತು ವರ್ಷಕ್ಕೂ ಅಧಿಕ ಅನುಭವದಲ್ಲಿರುವ ಗೋಮಾಳ ಜಮೀನು ದಿಢೀರ್ ಸರ್ಕಾರಿ ಶಾಲೆ, ಸ್ಮಶಾನಕ್ಕೆ ಮಂಜೂರು ಮಾಡಲಾಗಿದೆ. ದ್ವೇಷ ರಾಜಕಾರಣಕ್ಕೆ ಅಧಿಕಾರಿಗಳ ಬಳಸಿ ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಜೀವನಕ್ಕೆ ಆಧಾರವಾದ ಈ ಜಮೀನು ಬಗರ್ ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮನ್ನು ಹೊರದಬ್ಬುವ ಕಾರ್ಯ ಮುಂದುವರೆದರೆ ಇಲ್ಲೇ ವಿಷ ಕುಡಿದು ಜೀವ ಕಳೆದುಕೊಳ್ಳುವುದಾಗಿ ಸಂತ್ರಸ್ತ ಅನುಭವದಾರರು ತಮ್ಮ ಅಳಲು ತೋಡಿಕೊಂಡರು.

ವಡ್ಡರಹಳ್ಳಿ ಸರ್ವೇ ನಂಬರ್ 8 ಮತ್ತು 9 ರಲ್ಲಿ ಸುಮಾರು 22 ಎಕರೆ ಪ್ರದೇಶ ಇಲ್ಲಿನ ಬದ ರೈತರು ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಎರಡು ತಲೆಮಾರಿನ ಜೀವನ ಈಗಾಗಲೇ ಈ ಜಮೀನಲ್ಲಿ ಕಳೆದಿದೆ. ಅನುಭವದಲ್ಲಿರುವ ನಾವುಗಳು ಸಹ ಎರಡು ಎಕರೆ ಜಮೀನು ಮಾವಿನಗಿಡ ಬೆಳೆದು ಎರಡು ಬೋರ್ ವೆಲ್ ಕೊರೆಸಿ ಕೃಷಿ ನಡೆಸಲು ಮುಂದಾಗಿದ್ದೇವೆ. ಬಗರ್ ಹುಕುಂ ಸಮಿತಿಗೆ ನಮೂನೆ 53 ಮತ್ತು 57 ರ ಅರ್ಜಿ ಸಹ ಹಾಕಿದ್ದೇವೆ. ಎಲ್ಲರಿಗೂ ತಿಳಿದ ಈ ಜಮೀನಿಗೆ ಉದ್ದೇಶವಾಗಿ ಕಣ್ಣು ಹಾಕಿದ ಕೆಲವರು ಒಂದು ವರ್ಷದಲ್ಲಿ ಶಾಲೆಗೆ ಹಾಗೂ ಸ್ಮಶಾನಕ್ಕೆ ಮಂಜೂರು ಮಾಡಿದ್ದಾರೆ ಎಂದು ಸಂತ್ರಸ್ತ ರೈತ ರಂಗಧಾಮಯ್ಯ ತಮ್ಮ ಅಳಲು ತೋಡಿಕೊಂಡರು.

ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟು ದ್ವೇಷ ಕಾರುವ ಕೆಲವರು ಅಧಿಕಾರಿಗಳ ಮೂಲಕ ಈ ಕೆಲಸ ಮಾಡಿಸಿದ್ದಾರೆ. ಗೋಮಾಳ ಜಮೀನಿನ ಪೈಕಿ ಖಾಲಿ ಜಾಗ ಇದ್ದರೂ ನಮ್ಮ ಮಾವಿನ ಗಿಡಗಳ ಮೇಲೆ ದೃಷ್ಠಿ ಬಿದ್ದಿದೆ. ಶಾಲೆ ಸ್ಮಶಾನ ಈಗ ಮಂಜೂರಾಗಿದೆ. ಈ ಹಿಂದೆ ಅನುಭದಲ್ಲಿದ್ದು ನಾವು ಹಾಕಿರುವ ಅರ್ಜಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ರೈತರು ನಮ್ಮಗಳ ಜಾಗ ಹೊರತಾಗಿ ಬೇರೆ ಯಾರೊಬ್ಬರ ಜಮೀನಿಗೆ ಯಾಕೆ ಅಧಿಕಾರಿಗಳು ಹೋಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದು ದ್ವೇಷ ರಾಜಕಾರಣಕ್ಕೆ ಮಾಡಿರುವ ಕುತಂತ್ರ. ಆದರೆ ಅಧಿಕಾರಿಗಳು ಕೂಲಂಕುಷ ಪರಿಶೀಲನೆ ಮಾಡಿ ನಿರ್ಧರಿಸಬೇಕು. ನಮಗೆ ಇರುವ ಈ ಜಮೀನು ಇಲ್ಲವಾದರೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಅಸಹಾಯಕತೆ ತೋರಿದರು.

ಎರಡು ಎಕರೆ ಜಮೀನು ಶಾಲೆ ಮತ್ತು ಸ್ಮಶಾನಕ್ಕೆ ಮಂಜೂರು ಆಗಿದ್ದು ಗೋಮಾಳ ಜಮೀನು ಕಂದಾಯ ಇಲಾಖೆಯ ವಶದಲ್ಲಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ನಾವು ಕೆಲಸ ಮಾಡಬೇಕಿದೆ. ಈ ಹಿನ್ನಲೆ ಅಡಕೆ ಗಿಡಗಳ ನೆಡುವುದನ್ನು ನಿಲ್ಲಿಸಿ, ಕಾನೂನು ಪ್ರಕಾರ ಸರ್ಕಾರಕ್ಕೆ ಈ ಜಾಗ ಬಿಟ್ಟು ಕೊಡಲು ತಹಶೀಲ್ದಾರ್ ಬಿ.ಆರತಿ ಸ್ಥಳಕ್ಕೆ ಬಂದು ಸೂಚಿಸಿದರು. ಈ ಸಂದರ್ಭದಲ್ಲಿ ಅನುಭದಲ್ಲಿರುವ ರೈತರು ಪ್ರಾಣ ಬಿಟ್ಟೆವು ಜಮೀನು ಬಿಡೆವು ಎಂದು ಹಠಕ್ಕೆ ಬಿದ್ದು ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಸಹ ಧಾವಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸದಂತೆ ಎಚ್ಚರಿಕೆ ನೀಡಿದರು. ಮೂವತ್ತು ವರ್ಷಗಳ ಮಾವಿನ ಗಿಡಗಳು ಎರಡು ಕೊಳವೆಬಾವಿ ಎಲ್ಲವೂ ನಾವು ಇರುವಿಕೆಗೆ ಸಾಕ್ಷಿಯಾಗಿದೆ. ಯಾರೋ ಕಿಡಿಗೇಡಿಗಳ ಕೃತ್ಯಕ್ಕೆ ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಮನವಿ ಮಾಡಿದರು.

ಕತ್ತಲಾದ ಬಳಿಕ ಸರ್ವೇ ಕಾರ್ಯ ಮಾಡಿದ್ದು ನಮ್ಮಗಳ ಗಮನಕ್ಕೆ ಬಾರದೆ ನಮ್ಮಗಳ ಬಗರ್ ಹುಕುಂ ಅರ್ಜಿಗಳನ್ನು ಮಾಯ ಮಾಡಿ ಹುನ್ನಾರದಲ್ಲಿ ಜಮೀನು ಮತ್ತು ಸ್ಮಶಾನಕ್ಕೆ ಮಂಜೂರು ಮಾಡಲಾಗಿದೆ. ನಮ್ಮಗಳ ವಾಸ್ತವತೆ ಬಗ್ಗೆ ಪರಿಶೀಲಿಸಿ ಜಮೀನು ನಮಗೆ ಉಳಿಸಿಕೊಡಿ ಎಂದು ರೈತರು ಅಂಗಲಾಚಿದರು. ಒಂದು ತಾಸು ವಾಕ್ಸಮರ ನಡೆದು ಕೊನೆಗೆ ಯಥಾಸ್ಥಿತಿಯಲ್ಲಿ ಜಮೀನು ಇರಲಿ. ಯಾವುದೇ ಗಿಡ ನೆಡುವುದು, ಕೃಷಿ ನಡೆಸದಂತೆ ಸೂಚಿಸಿ ತೆರಳಿದರು.

ವಿಶೇಷವೆಂದರೆ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರ ಸ್ವಗ್ರಾಮದಲ್ಲಿ ಕಳೆದ 50 ವರ್ಷಗಳಿಂದ ಅನುಭದಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ತಾಲೂಕು ಆಡಳಿತದಿಂದ ನಡೆದಿದೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂತ್ರಸ್ತ ರೈತರಾದ ರಂಗೇಗೌಡ, ತೋಪೆಗೌಡ ಹಾಗೂ ರಂಗಧಾಮಯ್ಯ ಕುಟುಂಬ ಸದಸ್ಯರು ಹಾಗೂ ಗ್ರಾಪಂ ಸದಸ್ಯ ವೆಂಕಟೇಗೌಡ ಸ್ಥಳದಲ್ಲಿದ್ದರು. ಕಂದಾಯ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಿಗ ದಯಾನಂದ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!