ಗುಬ್ಬಿ: ತುರುವೇಕೆರೆ ಕ್ಷೇತ್ರಕ್ಕೆ ಒಳಪಡುವ ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯಕ್ಕೆ 25 ಕೋಟಿ ರೂಗಳ ಅಭಿವೃದ್ದಿ ಕೆಲಸ ಮಾಡಲಾಗಿದೆ. ಇನ್ನುಳಿದ ನಾಲ್ಕು ತಿಂಗಳಲ್ಲಿ ಮಣ್ಣು ಮುಕ್ತ ಕಲ್ಲೂರು ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಭರವಸೆ ನೀಡಿದರು.
ತಾಲ್ಲೂಕಿನ ಕಡಬ ಹೋಬಳಿ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಗ್ರಾಮಗಳ 3.50 ಕೋಟಿ ರೂಗಳ ಸಿಸಿ ರಸ್ತೆಗಳ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಅವರು ಹೈಟೆಕ್ ಆಸ್ಪತೆಯನ್ನು 3.80 ಕೋಟಿ ರೂಗಳಲ್ಲಿ ನಿರ್ಮಾಣ ಮಾಡಲಾಗುವುದು. 24 ಗಂಟೆಗಳ ಕರ್ತವ್ಯ ಮಾಡುವ ಅತ್ಯಾಧುನಿಕ ಆಸ್ಪತ್ರೆಯಲ್ಲೇ ಸದಾ ಸಿಗಲು ಕ್ವಾಟ್ರಸ್ ನಿರ್ಮಾಣ ಮಾಡಲಾಗುವುದು ಎಂದರು.
ಹೈಟೆಕ್ ಆಸ್ಪತ್ರೆಯನ್ನು ಇನ್ನೊಂದು ತಿಂಗಳಲ್ಲಿ ಆರೋಗ್ಯ ಸಚಿವರನ್ನು ಆಹ್ವಾನ ನೀಡಿ ಉದ್ಘಾಟನೆ ಮಾಡಲಾಗುವುದು. ಈ ಜೊತೆಗೆ ಕಲ್ಲೂರು ಗ್ರಾಮದಿಂದ ಕಲ್ಲೂರು ಕ್ರಾಸ್ ವರೆಗೆ 6 ಕೋಟಿ ರೂಗಳ ಕೆಲಸ ನಡೆಯಲಿದೆ. ಮಳೆ ನಿಂತ ತಕ್ಷಣ ಡಾಂಬರ್ ಕೆಲಸ ನಡೆಯಲಿದೆ ಎಂದ ಅವರು ಐದು ಕೋಟಿ ರೂಗಳನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ. ಕೆರೆಬಂಡಿಹಳ್ಳಿಯಲ್ಲಿ ಬೋರ್ ವೆಲ್ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆರೆಗೆ ನೀರು ಹಲವಾರು ವರ್ಷದಿಂದ ಬಂದಿಲ್ಲ ಎಂಬ ದೂರಿಗೆ ಈ ಬಾರಿ ಕೆರೆಯನ್ನು ಭರ್ತಿ ಮಾಡಲಾಯಿತು. ಉಳಿದ ಒಂದೆರೆಡು ಸಿಸಿ ರಸ್ತೆ ಕೆಲಸ ಶೀಘ್ರದಲ್ಲಿ ಮಾಡಲಾಗುವುದು ಎಂದರು.
ಮೋದಿ ಅವರ ಕೆಲಸ ಪ್ರತಿ ಹಳ್ಳಿಗೆ ತಲುಪಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡಾ ಬಹುತೇಕ ಜನಮನ್ನಣೆ ಕಾರ್ಯಕ್ರಮ ಜಾರಿಗೆ ತಂದಿದ್ದು, ನೇಕಾರರಿಗೆ ನಮ್ಮ ಸರ್ಕಾರ ಉಚಿತ ಯೋಜನೆಗಳು ರೂಪಿಸಿಕೊಟ್ಟಿದೆ. ಜನರ ಪ್ರೀತಿ ಗಳಿಸಿದ ಬಿಜೆಪಿ ಮತ್ತೊಮ್ಮೆ ಸರ್ಕಾರ ನಡೆಸಲಿದೆ. ನಾನು ಅಭಿವೃದ್ದಿ ಮಾಡಿರುವ ಕೆಲಸ ಜನರಿಗೆ ತಿಳಿದಿದೆ. ಮತ್ತೊಮ್ಮೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಕೆಲಸ ಮಾಡಿರುವ ಪ್ರತಿ ಹಳ್ಳಿಯಲ್ಲೂ ಉತ್ತಮ ಪ್ರತಿಕ್ರಿಯೆ ಕಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂಡಿಸಿಗೆರೆ ಗ್ರಾಪಂ ಉಪಾಧ್ಯಕ್ಷೆ ಭಾರತಿ ಚುಂಚಯ್ಯ, ಡೊಂಕಿಹಳ್ಳಿ ಶ್ರೀನಿವಾಸ್, ಮಾವಿನಹಳ್ಳಿ ಕಿರಣ್, ವಿ.ಕೋಡಿಹಳ್ಳಿ ರಮೇಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.