ಗುಬ್ಬಿ: ಅಡಕೆ ಕೊಬ್ಬರಿ ಧಾರಣೆ ಇಳಿತಕ್ಕೆ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ಪ್ರಶ್ನೆ ಗುರುತು ಮಾಡಿಸಿದ್ದೇನೆ. ಬೆಂಬಲ ಬೆಲೆ ನೀಡಿ ನೆಫೆಡ್ ಕೇಂದ್ರ ಶೀಘ್ರದಲ್ಲಿ ತೆರೆಯಲು ಮನವಿಯನ್ನು ಖುದ್ದು ನೀಡಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಭರವಸೆ ನೀಡಿದ್ದಾರೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಗದ್ದೇಹಳ್ಳಿ ಗ್ರಾಮದಲ್ಲಿ ಒಟ್ಟು 1.20 ಕೋಟಿ ರೂಗಳ ವಿವಿಧ ಗ್ರಾಮಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಒಳ ಮೀಸಲಾತಿ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಉಪ ಸಮಿತಿ ರಚಿಸಿ ಸಭೆಯನ್ನು ನಡೆಸಿದೆ. ಚುನಾವಣೆಗೆ ಮುನ್ನ ಈ ವಿಚಾರ ಸಾಕಾರಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುರುವೇಕೆರೆ ಕ್ಷೇತ್ರದಲ್ಲಿ 150 ಶಾಲೆಗಳ ದುರಸ್ಥಿ ಹಾಗೂ ಹೊಸ ಕೊಠಡಿ ನಿರ್ಮಾಣ ಹಾಗೂ ಹೊಸ ಶಾಲೆ ಮಂಜೂರು ಮಾಡಿಸಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಶೇಕಡಾ 80 ರಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಸಹ ನನ್ನನ್ನು ಕೈಬಿಡದೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಿ ಸಚಿವರಾಗಲು ಆಶೀರ್ವದಿಸಲಿದ್ದಾರೆ. ಈ ಜೊತೆಗೆ ಸಿ.ಎಸ್. ಪುರ ಹೋಬಳಿಯಲ್ಲಿ ಭಾಗಶಃ ಗ್ರಾಮಗಳಲ್ಲಿ ಮಣ್ಣು ಮುಕ್ತ ರಸ್ತೆ ನಿರ್ಮಾಣವಾಗುತ್ತಿದೆ. ನೀರು ರಸ್ತೆ ಬಹುತೇಕ ಗ್ರಾಮದಲ್ಲಿ ಅನುವು ಮಾಡಿದ ಹಿನ್ನಲೆ ನನ್ನ ಪರ ಜನಾಭಿಪ್ರಾಯ ಸಿಕ್ಕಿದೆ ಎಂದರು.
ಬೋರಪ್ಪನಹಳ್ಳಿ, ಮಾವಿನಹಳ್ಳಿ ಗೊಲ್ಲರಹಟ್ಟಿ, ಗದ್ದೇಹಳ್ಳಿ ಸೇರಿದಂತೆ 1.20 ಕೋಟಿ ರೂಗಳ ಸಿಸಿ ರಸ್ತೆ ನಿರ್ಮಾಣವಾಗಿದೆ. ಶೀಘ್ರದಲ್ಲಿ ಮಣೆಕುಪ್ಪೆ ಸಿ.ಎಸ್.ಪುರ ರಸ್ತೆಗೆ 8 ಕೋಟಿ ರೂ, ಅಂಕಳಕೊಪ್ಪದಿಂದ ಕೆ.ಜಿ.ಟೆಂಪಲ್ ರಸ್ತೆಗೆ 5 ಕೋಟಿ ಹಾಗೂ ಮಾವಿನಹಳ್ಳಿ ಮತ್ತಿಕೆರೆ ರಸ್ತೆಗೆ 5 ಕೋಟಿ ರೂಗಳನ್ನು ಮಂಜೂರು ಮಾಡಿಸಲಾಗುವುದು ಎಂದ ಅವರು ಕೆಲ ಗ್ರಾಮಗಳಿಗೆ ಕಾಲು ಇಡಲು ಅವಕಾಶ ಇರಲಿಲ್ಲ. ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಕೆಲಸ ಮಾಡಲಾಗಿದೆ. ಅವಶ್ಯ ಮೂಲ ಸೌಲಭ್ಯ ಒದಗಿಸಿದ್ದರ ಫಲ ಮತದಾರರು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಭದ್ರೆಗೌಡ, ಹುಲ್ಲೇಕೆರೆ ರಾಮಣ್ಣ, ಗೋವಿಂದರಾಜು, ರಾಧಾಕೃಷ್ಣ, ಬುಕ್ಕಸಾಗರ ಮಹದೇವಯ್ಯ, ಗಂಗಣ್ಣ, ಚನ್ನಿಗಪ್ಪ, ಕಿರಣ್, ಕುಮಾರ್, ಮರಿಯಣ್ಣಗೌಡ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.