ಕಾಡು ಗೊಲ್ಲರ ನಿಗಮಕ್ಕೆ 17 ಕೋಟಿ ಹಣ ವಾಪಸ್ ನೀಡದಿದ್ದರೆ ಚುನಾವಣೆ ಬಹಿಷ್ಕಾರಕ್ಕೂ ಸಿದ್ದ : ಎಚ್ಚರಿಕೆ

ಗುಬ್ಬಿ: ಕಾಡು ಗೊಲ್ಲರ ಅಭಿವೃದ್ದಿ ನಿಗಮಕ್ಕೆ 17 ಕೋಟಿ ಮೀಸಲಿಟ್ಟ ಸರ್ಕಾರ ಈಗ ವಾಪಸ್ ಪಡೆದು ದೇವರಾಜು ಅರಸು ನಿಗಮಕ್ಕೆ ಮರಳಿಸಿದ್ದಾರೆ. ಇದು ಖಂಡನೀಯ. ಅನುಷ್ಠಾನಕ್ಕೆ ಮುನ್ನ ಮರಳಿ ಪಡೆದ ಹಣ ಕೂಡಲೇ ನಮ್ಮಗಳ ಕ್ಷೇಮಾಭಿವೃದ್ಧಿಗೆ ಬಳಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕಾಡು ಗೊಲ್ಲರ ಸಮಾಜದ ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಣ್ಣ ಪುಟ್ಟ ಸಮಾಜದ ನಿಗಮಗಳು ರಚನೆಯಾಗಿ ಕೂಡಲೇ ಕಾರ್ಯಾನ್ಮುಖರಾದ ಸರ್ಕಾರ ಹಿಂದುಳಿದ ನಮ್ಮ ಸಮಾಜದ ಏಳಿಗೆಗೆ ಸಹಕರಿಸುತ್ತಿಲ್ಲ. ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೊಟ್ಟ ಮಾತಿನಂತೆ ಕಾಡು ಗೊಲ್ಲರ ಅಭಿವೃದ್ದಿ ನಿಗಮ ರಚಿಸಿ 17 ಕೋಟಿ ಮೀಸಲಿಟ್ಟು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ 40 ತಾಲ್ಲೂಕಿನಲ್ಲಿ ನಿರ್ಣಾಯಕರಾದ ನಮ್ಮ ಜನಾಂಗವನ್ನು ಕಡೆಗಣಿಸಿದ್ದಾರೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ನಮ್ಮ ಬಗ್ಗೆ ಸದನದಲ್ಲಿ ಚರ್ಚಿಸಬೇಕು. ಕೂಡಲೇ ನಮ್ಮ ಮೀಸಲು ಹಣ ನಿಗಮಕ್ಕೆ ಮರಳಿ ನೀಡದಿದ್ದರೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡಾ ಪ್ರಬಲ ಆಕಾಕ್ಷಿಯಾಗಿದ್ದು ಬಿಜೆಪಿ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ತಿಮ್ಮಣ್ಣ ಮಾತನಾಡಿ 12 ಜಿಲ್ಲೆಯಲ್ಲಿ ನಮ್ಮ ಜನಾಂಗ ನಿರ್ಣಾಯಕ ಎಂದು ತಿಳಿದು ಸಹ ನಮ್ಮ ಬಗ್ಗೆ ಅಸಡ್ಡೆ ತೋರಿರುವುದು ಸರಿಯಲ್ಲ. ನಿಗಮಕ್ಕೆ ನಾಮಕಾವಸ್ಥೆ ಅಧ್ಯಕ್ಷರ ನೇಮಕ ಮಾಡಿ ಮೀಸಲಿದ್ದ ಹಣವನ್ನು ವಾಪಸ್ ಪಡೆದ ಈ ಧೋರಣೆ ಸರಿಯಲ್ಲ. ರಾಜ್ಯದಲ್ಲಿ 6.50 ಲಕ್ಷ ಜನಸಂಖ್ಯೆಯ ಕಾಡು ಗೊಲ್ಲರ ಬಗ್ಗೆ ತಾತ್ಸಾರ ತೋರಬೇಡಿ. ನಿಗಮಕ್ಕೆ ಬಂದ ಹಣ ಮರಳಿದ್ದ ಬಗ್ಗೆ ಯಾರನ್ನು ಕೇಳಬೇಕು ತಿಳಿಯದಾಗಿದೆ. ಅಪ್ಪ ಇಲ್ಲದ ಸಮಾಜ ಆಗಿದೆ. ಕೂಡಲೇ ಕ್ರಮ ವಹಿಸದಿದ್ದರೆ ಚುನಾವಣೆಯಲ್ಲಿ ಮತ ಚಲಾಯಿಸದೆ ಬಹಿಷ್ಕರಿಸುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಡು ಗೊಲ್ಲ ಸಮಾಜದ ಮುಖಂಡರಾದ ನಾಗರಾಜು, ಮಲ್ಲಿಕಾರ್ಜುನ, ಲಿಂಗಣ್ಣ, ಶ್ರೀನಿವಾಸ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!