ಮಧುಗಿರಿ : 2019ರ ಸೆ.20 ರಂದು ಸಂಜೆ 7.00 ಗಂಟೆ ಸಮಯದಲ್ಲಿ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಹಿಂಭಾಗ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೃತೆ ಪ್ರೇಮಲತಾ (55 ) ಮನೆಯ ಹಾಲ್‌ನಲ್ಲಿ ಬಟ್ಟೆ ಮಡಚಿಡುತ್ತಿದ್ದು ಅವರ ತಂದೆ ದೊಡ್ಡಣ್ಣ (75) ಇವರು ಟಿ.ವಿ ನೋಡುತ್ತಿದ್ದಾಗ ಮೃತೆಯ ಮಗ ವೆಂಕಟೇಶ ಮನೆಯ ಮೇಲೆ ಸೌದೆ ಜೋಡಿಸುತ್ತಿದ್ದ ಸಂಧರ್ಭದಲ್ಲಿ ಮೃತೆಯ ಅಳಿಯ ಶಿರಾ ತಾಲ್ಲೂಕಿನ
ಹುಲಿಕುಂಟೆ ಹೋಬಳಿಯ ಯಲಪೇನಹಳ್ಳಿ ಗ್ರಾಮದ ವಾಸಿ ಎಸ್. ಪ್ರದೀಪ್ ಕುಮಾರ್ (39) ಈತನು ತನ್ನ ಹೆಂಡತಿ ಮಾನಸಳ ಜೊತೆ ಸಂಸಾರ ಮಾಡಲು ತನ್ನ ಅತ್ತೆ ಬಿಡುವುದಿಲ್ಲ ಎಂದು ಸಿಟ್ಟಾಗಿ ಅತ್ತೆಯನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಅತ್ತೆ ವಾಸವಿದ್ದ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಅತ್ತೆ ಪ್ರೇಮಾಲತಾಳ ಎದೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಲೆ ಮಾಡಿ ಮೃತಳನ್ನು ಬಿಡಿಸಲು ಹೋದ ಅವರ ತಂದೆ ದೊಡ್ಡಣ್ಣ ಹಾಗೂ ಮೃತಳ ಮಗ ವೆಂಕಟೇಶ ಇವರಿಗೂ ಸಹ ಬೆದರಿಸಿ ಅದೇ ಚೂರಿಯಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಅಂದಿನ ಬಡವನಹಳ್ಳಿ ಠಾಣೆ ಎ.ಎಸ್.ಐ. ಬಿ ನಾಗರಾಜು ಮತ್ತು ಮುಂದಿನ ತನಿಖೆ ಕೈಗೊಂಡ ಕೆ. ಪ್ರಭಾಕರ್‌ರವರು ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಾದವ್ ಕರಕೆರೆ ಯವರು ಆರೋಪಿತನ ಮೇಲಿನ ಆಪಾದನೆಯು ರುಜುವಾತಾಗಿದ್ದರಿಂದ ಭಾ.ದಂ.ಸಂ ಕಲಂ 302 ರಡಿ ಜೀವಾವದಿ ಶಿಕ್ಷೆ ಮತ್ತು 1,00,000/- ರೂ ದಂಡ, ಕಲಂ: 307 ಕೊಲೆ ಯತ್ನಕ್ಕೆ 7 ವರ್ಷ ಶಿಕ್ಷೆ ಮತ್ತು 20,000/- ರೂ ದಂಡ, ಅಥವಾ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಕಲಂ: 451 ರಡಿ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು 5,000/- ರೂ. ದಂಡ ವಿಧಿಸಿ ಶಿಕ್ಷೆ ನೀಡಿ ಆದೇಶಿಸಿರುತ್ತಾರೆ.
ದಂಡದ ಹಣದಲ್ಲಿ 1,00,000/- ರೂ. ಹಣವನ್ನು ಮೃತಳ ಮಗ ಹಾಗೂ ಗಾಯಾಳು ವೆಂಕಟೇಶನಿಗೆ ಪರಿಹಾರವಾಗಿ ಮತ್ತು ಮತ್ತೋರ್ವ ಗಾಯಾಳು ಮೃತೆಯ ತಂದೆ ದೊಡ್ಡಣ್ಣನಿಗೆ 20,000/- ರೂ. ಪರಿಹಾರವಾಗಿ ನೀಡುವಂತೆ ಆದೇಶಿಸಿರುತ್ತಾರೆ. ಸರಕಾರಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.