ಗುಬ್ಬಿ ಪಟ್ಟಣದ ಸ್ವಚ್ಚತೆ ಕಾಪಾಡುವಂತೆ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಪಪಂ ಸದಸ್ಯರು

ಗುಬ್ಬಿ: ಇಡೀ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಪಪಂ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿಫಲರಾಗಿದ್ದಾರೆ. ತಿಂಗಳುಗಟ್ಟಲೆ ಒಂದಡೆ ಕಸ ಶೇಖರಣೆ ಆಗಿದ್ದರೂ ವಿಲೇವಾರಿ ಮಾಡಲು ಸಿಬ್ಬಂದಿ ಕೊರತೆ ಮುಂದಿಟ್ಟು ಕಾಲ ಕಳೆಯುತ್ತೀರಿ ಎಂದು ಎಲ್ಲಾ ಪಪಂ ಸದಸ್ಯರು ಒಕ್ಕೊರಲಿನಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ನೇತೃತ್ವ ಹಾಗೂ ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ಆರಂಭಕ್ಕೆ ಮುನ್ನವೇ ಕಸ ವಿಲೇವಾರಿ, ಚರಂಡಿ ಸ್ವಚ್ಚತೆ, ಕಸ ವಿಲೇವಾರಿ ವಿಳಂಬ, ಜಂಗಲ್ ತೆರವು ಹೀಗೆ ಅನೇಕ ವಿಚಾರವನ್ನು ಪ್ರಸ್ತಾಪಿಸಿದ ಸದಸ್ಯರು ಈ ನಿರ್ಲಕ್ಷ್ಯಕ್ಕೆ ಮುಖ್ಯಾಧಿಕಾರಿಗಳೇ ನೇರ ಹೊಣೆ ಎಂದು ತೀವ್ರ ಚರ್ಚೆ ನಡೆಸಿದರು.

ಜಂಗಲ್ ತೆರವಿಗೆ ಖರೀದಿಸಿದ ವೀಡ್ ಕಟರ್ ಯಂತ್ರ ಬಳಸಲು ಆಪರೇಟರ್ ಕೊರತೆ ಇದೆ. ಒಬ್ಬರು ಮಾತ್ರ ಈ ಕೆಲಸ ಮಾಡಲು ಮುಂದಾದರೆ ವರ್ಷ ಪೂರ್ತಿ ಕೆಲಸ ನಡೆಯುತ್ತದೆ. ಈಗಾಗಲೇ ಯಂತ್ರ ಖರೀದಿಸಿ ಕೆಟ್ಟು ಬಿಸಾಕಿದ ಆರೇಳು ಯಂತ್ರ ಬಿದ್ದಿವೆ. ಹೀಗೆ ಹಣ ವ್ಯಯ ಮಾಡುವ ಬದಲು ಖಾಸಗಿ ಸಂಸ್ಥೆಗೆ ವಹಿಸಿದರೆ ಮೂರು ದಿನದಲ್ಲಿ ಇಡೀ ಪಟ್ಟಣ ಅಚ್ಚುಕಟ್ಟು ಮಾಡುತ್ತಾರೆ ಎಂದು ಸದಸ್ಯ ಸಿ.ಮೋಹನ್ ಸಲಹೆ ನೀಡಿ ಹೊಸ ಬಡಾವಣೆಯಲ್ಲಿ ನಿರ್ಮಾಣ ಸಮಯದಲ್ಲಿ ಆಗಿರುವ ಸಾವಿರಾರು ಅಡಿಗಳ ಅವ್ಯವಹಾರ ತನಿಖೆ ಮಾಡಿ ನಮ್ಮ ಪಟ್ಟಣ ಪಂಚಾಯಿತಿಗೆ ಸಂಬಂದಿಸಿದ ಜಾಗ ವಾಪಸ್ ಪಡೆಯಲು ಸೂಚಿಸಿದರು.

ಶಾಲೆಯೊಂದರ ಮುಂದೆ ಮದ್ಯದ ಬಾಟಲ್ ರಾಶಿ ಬಿದ್ದಿದ್ದು, ಸ್ವಚ್ಚಗೊಳಿಸಲು ಹೇಳಿದ್ದರೂ ಪ್ರಯೋಜನವಾಗಿಲ್ಲ. ಕಸ ವಿಲೇವಾರಿ ವಾಹನಗಳ ದುಸ್ಥಿತಿ ಕಣ್ಣಲ್ಲಿ ನೀರು ತರಿಸುತ್ತದೆ. ಕಸ ಸಾಗಿಸುವ ವೇಳೆ ಎಲ್ಲಾ ಕಸ ರಸ್ತೆಯ ಮೇಲೆ ಬಿದ್ದಿರುತ್ತದೆ. ಮೊದಲು ವಾಹನ ಸರಿಪಡಿಸಿ ಚರಂಡಿ ಸ್ವಚ್ಚಗೊಳಿಸಿ ಎಂದು ತಾಕೀತು ಮಾಡಿದ ಸದಸ್ಯ ಜಿ.ಆರ್.ಶಿವಕುಮಾರ್, ಪಟ್ಟಣ ಪಂಚಾಯಿತಿ ಸ್ಥಳದಲ್ಲಿ ದೊಡ್ಡ ತರಕಾರಿ ಮಳಿಗೆ ಮಾಡಿ ಅದಕ್ಕೆ ಬಾಡಿಗೆ ವಸೂಲಿ ನಡೆದಿದೆ. ಈ ಬಗ್ಗೆ ಕ್ರಮ ವಹಿಸಿ ಕೂಡಲೇ ನಮ್ಮ ಸ್ಥಳ ಹಾಗೂ ಪುಟ್ ಪಾತ್ ತೆರವು ಮಾಡಿಸಿ ಎಂದು ಸೂಚಿಸಿದರು.

ಇವೆಲ್ಲದರ ಮಧ್ಯೆ ಕೆಲ ಬಿಲ್ ಪಾವತಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೂಡಲೇ ತನಿಖೆಗೆ ಒಳಪಡಿಸಲು ಆಗ್ರಹಿಸಿದ ಸದಸ್ಯರು ಆಲಂ ಖರೀದಿಯಲ್ಲಿ 8.50 ಟನ್ ಖರೀದಿಗೆ 1.20 ಲಕ್ಷ ಬಿಲ್ ಆಗಿದೆ. ಆದರೆ ವಾಸ್ತವದಲ್ಲಿ ಆಲಂ ಬಂದ ಬಗ್ಗೆ ಮಾಹಿತಿ ದಾಖಲೆ ಇಲ್ಲ. ಸ್ಯಾನಿಟೆಜರ್ ಖರೀದಿಗೆ 4.20 ಲಕ್ಷ ಮಂಜೂರು ಸಹ ಲೆಕ್ಕವಿಲ್ಲ. ಈ ಜೊತೆಗೆ ಹಾರ್ಡ್ ವೇರ್ ಅಂಗಡಿಯೊಂದರಲ್ಲಿ 13.21 ಲಕ್ಷ ರೂ ಹಣ ನೀಡಿರುವ ಪೈಪ್ ಖರೀದಿ ಬಗ್ಗೆ ಬಾರಿ ಅವ್ಯವಹಾರ ಕಂಡಿದೆ. ಈ ಮೂರು ಬಿಲ್ ಪಾವತಿ ಬಗ್ಗೆ ತನಿಖೆ ಮಾಡಲು ಒತ್ತಾಯ ಮಾಡಿ ಪ್ರತಿ ವಾರ್ಡ್ ಗೆ ಇಂತಿಷ್ಟು ನಳ ಸಂಪರ್ಕ ಲೆಕ್ಕವಿದೆ. ಆದರೆ ನಲ್ಲಿ ಅಳವಡಿಕೆಗೆ ತಗಲುವ ವೆಚ್ಚ ನೋಡಿದರೆ ಗಾಬರಿ ಆಗುವುದು. 19 ವಾರ್ಡ್ ಗೆ 3 ರಿಂದ 4 ಲಕ್ಷದಲ್ಲಿ ಕೆಲಸ ಮುಗಿಯುವಲ್ಲಿ 13 ಲಕ್ಷ ಬಿಲ್ ಬಗ್ಗೆ ಪ್ರಾಮಾಣಿಕ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದೀರ್ಘ ಚರ್ಚೆಯ ನಂತರ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಗುದ್ದಲಿ ಪೂಜೆಗೆ ನಮ್ಮನ್ನು ಆಹ್ವಾನಿಸಿಲ್ಲ ಎಂದು ಬಿಜೆಪಿ ಸದಸ್ಯರು ಮುಖ್ಯಾಧಿಕಾರಿಗಳನ್ನ ಪ್ರಶ್ನಿಸಿದರು. ಎಲ್ಲಾ ಸದಸ್ಯರನ್ನು ಗೌರವವಾಗಿ ನಡೆಸಿಕೊಳ್ಳಬೇಕು. ಲಿಖಿತ ರೂಪದಲ್ಲಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಬೇಕು. ಕಾಟಾಚಾರಕ್ಕೆ ಪೂಜೆ ಒಂದು ತಾಸು ಇದೆ ಅನ್ನುವ ವೇಳೆಗೆ ಫೋನ್ ಮಾಡುವುದು ಬೇಕಾಬಿಟ್ಟಿ ಜವಾಬ್ದಾರಿ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸದಸ್ಯರು ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುವುದಾಗಿ ಎಚ್ಚರಿಕೆ ನೀಡಿದರು.

ನಂತರ ಎಲ್ಲಾ ಚರ್ಚೆ ಆಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಖಾಸಗಿ ವ್ಯಕ್ತಿಗಳ ನೇಮಕ ಮಾಡಿಕೊಂಡು ತುರ್ತು ಸ್ವಚ್ಚತೆ ಕೆಲಸ ಮಾಡಿಸಲು ಸೂಚಿಸಿದರು. ಎಲ್ಲಾ ಬೋಗಸ್ ದಾಖಲೆ ರಚಿಸಿಯೇ ಹಣ ಲಪಟಾಯಿಸುತ್ತಾರೆ. ಈ ಬಗ್ಗೆ ತನಿಖೆ ಮಾಡಿದರೂ ಸೃಷ್ಠಿಯಾದ ದಾಖಲೆ ಸಿಗುತ್ತದೆ ಎಂದರು. ನಂತರ ಎಲ್ಲಾ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಕೆಲಸ ಮಾಡಲು ಸೂಚಿಸಿದರು. ನಂತರ ಕೆಲ ಯೋಜನೆ ಅನುಷ್ಠಾನ, ಕ್ರಿಯಾ ಯೋಜನೆ ಅನುಮೋದನೆ ಹೀಗೆ ಅನೇಕ ವಿಚಾರ ಪ್ರಸ್ತಾಪವಾಯಿತು. ಅಧ್ಯಕ್ಷ ಅಣ್ಣಪ್ಪಸ್ವಾಮಿ ಕೆಲ ಸಲಹೆ ಸೂಚನೆ ಅಧಿಕಾರಿಗಳಿಗೆ ನೀಡಿ ಮುಂದಿನ ದಿನದಲ್ಲಿ ಸ್ವಚ್ಚ ಗುಬ್ಬಿ ನಿರ್ಮಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಕೆ.ಮಹಾಲಕ್ಷ್ಮೀ, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಗಳಾದ ಬಿಂದುಸಾರ, ಚಂದ್ರಶೇಖರ, ಕಂದಾಯ ನಿರೀಕ್ಷಕ ನಾಗೇಶ್, ಅಂತರಾಜು, ಪ್ರೀತಂ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!