ಮಧುಗಿರಿ : ತಾಲೂಕಿನಲ್ಲಿ ಹಿಂದಿನ ತಲೆಮಾರಿನವರು ಶಾಲಾ ಕಟ್ಟಡ ಮತ್ತು ಮೈದಾನಕ್ಕೆಂದು ದಾನ ನೀಡಿದ ಜಮೀನುಗಳ ಇ-ಸ್ವತ್ತು ದಾಖಲೆಗಳನ್ನು ಇಲ್ಲಿಯವರೆಗೂ ಮಾಡಿಲ್ಲ. ಗ್ರಾಮದ ಪಿಡಿಓಗಳು ತಕ್ಷಣ ದಾಖಲಾತಿಗಳನ್ನು ಸಮರ್ಪಕಗೊಳಿಸಿ ಇ-ಸ್ವತ್ತು ಮಾಡಿಸಿ ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ನೀಡಬೇಕು ಎಂದು ಜಿ.ಪಂ ಸಿಇಓ ವಿದ್ಯಾಕುಮಾರಿ ಸೂಚಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ದಾನ ನೀಡಿದ ಜಮೀನುಗಳ ದಾಖಲಾತಿಗಳು ಇಂದಿಗೂ ಆಗಿಲ್ಲ. ಹಿಂದಿನ ತಲೆಮಾರಿನವರು ದಾನವಾಗಿ ನೀಡಿದ ಜಮೀನುಗಳನ್ನು ಕೆಲ ಭಾಗಗಳಲ್ಲಿ ಈಗ ಅವರ ಮೊಮ್ಮೊಕ್ಕಳು ಬಂದು ಶಾಲೆಯ ಜಮೀನು ನಮ್ಮದು ಎನ್ನುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಪಿಡಿಓಗಳು ಎಚ್ಚೆತ್ತುಕೊಂಡು ತಕ್ಷಣ ಎಲ್ಲಾ ಸರ್ಕಾರಿ ಶಾಲಾ ಸ್ಥಳಗಳನ್ನು ಇ-ಸ್ವತ್ತು ಮಾಡಿಸಿ ಎಂದು ಪಿಡಿಓ ಗಳಿಗೆ ಸೂಚನೆ ನೀಡಿದ ಅವರು ನಂತರ ಎಷ್ಟು ಶಾಲೆಗಳ ಜಮೀನುಗಳ ಇ-ಸ್ವತ್ತು ಪ್ರಕ್ರಿಯೆ ಬಾಕಿಯಿದೆ ಎಂದು ಬಿಇಓ ರವರ ಬಳಿ ಮಾಹಿತಿ ಕೇಳಿದಾಗ, ತಾಲೂಕಿನಲ್ಲಿ ಒಟ್ಟು 164 ಶಾಲೆಗಳಲ್ಲಿ 58 ಶಾಲೆಗಳಿಗೆ ಇ-ಸ್ವತ್ತು ಖಾತೆ ಆಗಿದೆ ಉಳಿದ 106 ಶಾಲಾ ಮೈದಾನಗಳ ಇ-ಸ್ವತ್ತು ಬಾಕಿಯಿದೆ. ತಹಶೀಲ್ದಾರ್ ವ್ಯಾಪ್ತಿಯಲ್ಲಿ 88 ಪ್ರಕರಣಗಳಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಇಓ ಗೆ ಮಾಹಿತಿ ನೀಡಿದರು.
ಈ ಹಿಂದೆ ಸ್ವಸಹಾಯ ಸಂಘ ಎಂದು ಇದ್ದದ್ದು, ಮುಂದಿನ ದಿನಗಳಲ್ಲಿ ಈಗ ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘ ಎಂಬುದಾಗಿ ನಾಮಕರಣ ಮಾಡಿದ್ದು, ಜ. 12 ಕ್ಕೆ ಸಿಎಂ ಉದ್ಘಾಟನೆ ನೆರವೇರಿಸಲಿದ್ದು, ಈ ಸಂಘಗಳಿಗೆ ಸಾಲ 5 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದ್ದು, ಒಂದು ಲಕ್ಷ ಸಬ್ಸಿಡಿ ಸಿಗಲಿದೆ. ಸಂಬಂದಪಟ್ಟ ಪಿಡಿಓಗಳು ಸಾಲ ಪಡೆಯುವ ಸಂಘಗಳ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ ಬ್ಯಾಂಕಿಗೆ ಅವರ ಮೂಲಕ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೋಡ್ಲಾಪುರ ಪಿಡಿಓ ನಾಗಮಣಿರವರ ಸರ್ಕಾರಿ ನಂಬರ್ ಗೆ ಕರೆ ಮಾಡಿದರೆ ನಟ್ ರೀಚಬಲ್ ಬರುತ್ತದೆ. ಖಾಸಗಿ ನಂಬರ್ ಗೆ ಕರೆ ಮಾಡಿದರೆ ಮಾತ್ರ ಕರೆ ಸ್ವೀಕರಿಸುತ್ತಾರೆ. ಕೇಳಿದರೆ ಹಣ ಇಲ್ಲ ಹಾಗಾಗಿ ರೀಚಾರ್ಜ್ ಮಾಡಿಸಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದಾಗ ಪಿಡಿಓರವರನ್ನು ತರಾಟೆಗೆ ತೆಗೆದುಕೊಂಡ ಸಿಇಓ, ಸಾರ್ವಜನಿಕರು ಕರೆ ಮಾಡಿದಾಗ ಕರೆ ಸ್ವೀಕರಿಸಿ ಶಾಂತ ರೀತಿಯಲ್ಲಿ ಉತ್ತರಿಸಬೇಕು ಎಂದು ತಾಕೀತು ಮಾಡಿದರು.
ಡ್ಯೂಯಲ್ ನಂಬರ್ ಸಮಸ್ಯೆ :
ದೊಡ್ಡಯಲ್ಕೂರು ನಿವೃತ್ತ ಪಿಡಿಓ ನಾಗರಾಜು ನಿವೃತ್ತರಾಗಿ ಒಂದು ವರ್ಷ ಆಗಿದ್ದರೂ ಸರ್ಕಾರಿ ಸಿಮ್ ಬಳಸುತ್ತಿದ್ದು, ಹಾಲಿ ಪಿಡಿಓ ಗೆ ಕರೆ ಮಾಡಿದರೆ ನಿವೃತ್ತ ಪಿಡಿಓ ಗೆ ಹೋಗುತ್ತದೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬಂದಾಗ ಉಪ ಕಾರ್ಯದರ್ಶಿ ಅತೀಕ್ ಪಾಷ ನೇರವಾಗಿ ಕರೆ ಮಾಡಿದಾಗ ಅವರಿಗೆ ಕರೆ ಕನೆಕ್ಟ್ ಆಗಿದ್ದು, ನಿವೃತ್ತರಾದವರ ಬಳಿ ಮತ್ತು ಹಾಲಿ ಇರುವವರ ಪಿಡಿಓ ಬಳಿಯೂ ಒಂದೇ ನಂಬರ್ ಇದ್ದು, ಇರಡೂ ನಂಬರ್ ಗೂ ಕರೆ ಮಾಡಿದರೂ ರಿಂಗ್ ಆಗಿದೆ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು ಸರಿಪಡಿಸಿಕೊಳ್ಳಿ ಎಂದು ಪಿಡಿಓ ಗೆ ಸೂಚಿಸಿದರಾದರೂ ಇಬ್ಬರಿಗೆ ಒಂದೇ ಸಂಖ್ಯೆ ಹೇಗೆ ನೀಡಲಾಗುತ್ತದೆ ಎಂಬುದು ಮಾತ್ರ ಸಭೆಯಲ್ಲಿದ್ದವರಿಗೂ ಅರ್ಥವಾಗಲಿಲ್ಲ.
ಕೋಡ್ಲಾಪುರ ಗ್ರಾ.ಪಂ ಗೆ ಕಂಪ್ಯೂಟರ್ ಆಪರೇಟರ್ ಒಬ್ಬರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ಇದುವರೆಗೂ ನೀಡಿರುವ ವೇತನವನ್ನು ಮರುಪಾವತಿ ಮಾಡಿಸಿಕೊಳ್ಳಿ. ನೀವಾದರೂ ಪಾವತಿ ಮಾಡಿ ಅವರಿಂದಲಾದರೂ ಕಟ್ಟಿಸಿ ಕೊಡಿ ಎಂದು ಪಿಡಿಓಗೆ ಸೂಚಿಸಿದ ಸಿಇಓ, ಈ ನೇಮಕಾತಿಯನ್ನು ಪೂರ್ವ ಅನುಮೋದನೆ ಪಡೆಯದೆ ಕಾನೂನನ್ನು ಗಾಳಿಗೆ ತೂರಿ ನೇರ ನೇಮಕಾತಿ ಮಾಡಿಕೊಂಡಿದ್ದು, ಪಿಡಿಓ ರವರನ್ನು ಅಮಾನತು ಮಾಡುವಂತೆ ಉಪ ಕಾರ್ಯದರ್ಶಿ ಅತೀಕ್ ಪಾಷರವರಿಗೆ ಸೂಚನೆ ನೀಡಿದರು.
ಐಡಿ ಹಳ್ಳಿ ಗ್ರಾಮ ವ್ಯಾಪ್ತಿಯ ಚೌಳಹಳ್ಳಿ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಗ್ರಾಪಂ ಗೆ ಒಳಪಡದೆ ಇದ್ದರೂ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಈ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ ಹಣ ವಾಪಸ್ ತೆಗೆದುಕೊಳ್ಳುವಂತೆ ಪಿಡಿಒ ಗೆ ಸೂಚಿಸಿದರು.
ಸಭೆಯಲ್ಲಿ ತಾ.ಪಂ ಇಓ ಲಕ್ಷ್ಮಣ್, ತಾಲೂಕು ಯೋಜನಾಧಿಕಾರಿ ಮಧುಸೂದನ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಗುರುಮೂರ್ತಿ, ಆಡಳಿತ ಉಪ ಕಾರ್ಯದರ್ಶಿ ಹಾಲಪ್ಪ ಪೂಜಾರ್, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.