ಗುಬ್ಬಿ: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ ಕ್ಷೇತ್ರ ಪ್ರವಾಸದಲ್ಲಿ ನಿರತರಾಗಿ ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡುವವರಿಗೆ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಮೊದಲ ಆದ್ಯತೆ ಇರುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳು ಇದ್ದು, ಅವರನ್ನು ಮನವೊಲಿಸಿ ಪಕ್ಷದತ್ತ ತರುವುದು, ಪಕ್ಷದಿಂದ ದೂರ ಉಳಿದ ಪ್ರಾಮಾಣಿಕ ಕಾರ್ಯಕರ್ತರು, ಮುಖಂಡರನ್ನು ಸಂಘಟಿತರಾಗಿಸುವ ಕೆಲಸ ಆಕಾಂಕ್ಷಿಗಳು ನಡೆಸಿ ಮುಂದಿನ ದಿನದಲ್ಲಿ ಬಲವರ್ಧನೆಗೆ ಶ್ರಮಿಸಿದವರಿಗೆ ಅಭ್ಯರ್ಥಿಯಾಗಿ ಘೋಷಿಸುವ ಕಾರ್ಯ ನಡೆಯಲಿದೆ ಎಂದು ಆಕಾಂಕ್ಷಿಗಳಿಗೆ ಉತ್ತೇಜನ ನೀಡಿದರು.
ಬಿಜೆಪಿ ಆಡಳಿತಕ್ಕೆ ಬೇಸತ್ತ ಮತದಾರರನ್ನು ಕಾಂಗ್ರೆಸ್ ನತ್ತ ಸೆಳೆಯುವ ಕೆಲಸ ಈ ಕ್ಷಣದಿಂದ ನಡೆಸಬೇಕು. ಮೂಲ ಕಾಂಗ್ರೆಸಿಗರು ಪಕ್ಷ ಸಂಘಟನೆಗೆ ಶ್ರಮಿಸಿರುತ್ತಾರೆ. ಅವರನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡುತ್ತದೆ. ಕೊನೆ ಗಳಿಗೆಯಲ್ಲಿ ಬರುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಪಕ್ಷ ಸದೃಢಗೊಳಿಸಿ ಎಂದ ಅವರು ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಚಟುವಟಿಕೆಯನ್ನು ಹೈ ಕಮಾಂಡ್ ಗಮನಕ್ಕೆ ಬರುತ್ತಿದೆ. ಪಕ್ಷ ವಿರೋಧಿ ಕೆಲಸ ಮಾಡುವವರಿಗೆ ಅವಕಾಶವಿಲ್ಲ. ಸೂಕ್ಷ್ಮವಾಗಿ ಅವಲೋಕಿಸುವ ಹಿರಿಯರು ಪಕ್ಷಕ್ಕೆ ದುಡಿದವರಿಗೆ ಆದ್ಯತೆ ನೀಡುತ್ತಾರೆ. ನಿಮ್ಮಗಳ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಾಗಿದ್ದು, ಬಿಜೆಪಿ ಜನ ವಿರೋಧಿ ಆಡಳಿತ ಕಂಡು ಬೇಸತ್ತ ಮತದಾರರು ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷ ಚಟುವಟಿಕೆ ಚುರುಕುಗೊಳಿಸಿ ಕಾರ್ಯಕರ್ತರ ಪಡೆ ಪ್ರತಿ ಬೂತ್ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದೇವೆ. ಕೆಪಿಸಿಸಿ ಸೂಚಿಸಿದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿ, ಭಾರತ್ ಜೋಡೋ ಕೂಡಾ ಬಹು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಆಡಳಿತ ಗುಬ್ಬಿಯಲ್ಲಿ ಕಂಡಿಲ್ಲ. ಈ ಬಾರಿ ಕಾಂಗ್ರೆಸ್ ನತ್ತ ಇಡೀ ಕ್ಷೇತ್ರದ ಜನತೆ ಗಮನ ಹರಿಸಿದ್ದಾರೆ. ಈ ಅವಕಾಶ ಪಡೆಯಲು ಹೊರಗಿನವರು ಬರುವುದಕ್ಕೆ ಬಿಡದೆ ಹಲವಾರು ವರ್ಷದಿಂದ ಸಂಘಟನೆ ಮಾಡಿದವರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಭೆಯ ನಂತರ ಗುಬ್ಬಿ ತಾಲ್ಲೂಕು ವೀರಶೈವ ಸಮಾಜದ ಮುಖಂಡರು ಮಯೂರ ಜಯಕುಮಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಗುಬ್ಬಿ ಕ್ಷೇತ್ರದಲ್ಲಿ ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮೀಸಲು ನೀಡುವಂತೆ ಮನವಿ ಸಲ್ಲಿಸಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೆಪಿಸಿಸಿ ಕಾರ್ಯದರ್ಶಿ ಮುರುಳಿಧರ ಹಾಲಪ್ಪ, ಕೆಪಿಸಿಸಿ ಸಹ ಸಂಯೋಜಕ ಬಾಲಕೃಷ್ಣ, ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ, ಮುಖಂಡರಾದ ರೇವಣ್ಣಸಿದ್ದಯ್ಯ, ಕಡಬ ಶಿವಕುಮಾರ್, ಕೆ.ಆರ್.ತಾತಯ್ಯ, ಟಿ.ಆರ್.ಚಿಕ್ಕರಂಗಯ್ಯ, ಎಂ.ವಿ.ಶ್ರೀನಿವಾಸ್, ಶಶಿಕಿರಣ್, ಮಹಮದ್ ಸಾದಿಕ್, ಸಲೀಂಪಾಷ, ಜಿ.ವಿ.ಮಂಜುನಾಥ್, ಸೌಭಾಗ್ಯಮ್ಮ, ಶಾರದಮ್ಮ, ಜಿ.ಎಸ್.ಮಂಜುನಾಥ್, ಶಂಕರೇಗೌಡ, ಶಿವಾನಂದ್, ರಂಗನಾಥ್, ಅಮ್ಮನಘಟ್ಟ ಶಿವಣ್ಣ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.