ಗುಬ್ಬಿ: ಕಲ್ಪತರು ಜಿಲ್ಲೆಯಲ್ಲಿ ತೆಂಗು ಕೊಬ್ಬರಿ ಪ್ರಧಾನ ವಾಣಿಜ್ಯ ಬೆಳೆ ಎನಿಸಿದೆ. ಕೊಬ್ಬರಿ ಧಾರಣೆ ಇಳಿತದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬೆಂಬಲ ಬೆಲೆ ನಿಗದಿಗೊಳಿಸಿ ನೆಫೆಡ್ ಖರೀದಿ ಕೇಂದ್ರ ಶೀಘ್ರದಲ್ಲಿ ತೆರೆಯಲು ಒತ್ತಾಯಿಸುವ ಬಗ್ಗೆ ಭರವಸೆ ನೀಡಿದ್ದ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತೆಂಗು ರೈತರ ಸಂಕಷ್ಟಕ್ಕೆ ನೆರವು ನೀಡಲು ಮನವಿ ಮಾಡಿ ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೊಬ್ಬರಿ ಮತ್ತು ಅಡಕೆ ಧಾರಣೆ ಇಳಿತದ ಬಗ್ಗೆ ಕಾಳಜಿ ತೋರಿ ಸದನದಲ್ಲಿ ಪ್ರಸ್ತಾಪಿಸಿ ನೆಫೆಡ್ ಕೇಂದ್ರ ತೆರೆಯಲು ಸಿಎಂ ಅವರೊಂದಿಗೆ ಪ್ರಸ್ತಾಪಿಸುವ ಭರವಸೆ ನೀಡಿದ್ದರು. ಅದರಂತೆ ಪತ್ರ ಬರೆದು ಅಕಾಲಿಕ ಮಳೆ, ನುಸಿ ರೋಗ ಹೀಗೆ ಅನೇಕ ಕಾಯಿಲೆಗೆ ತುತ್ತಾದ ತೆಂಗು ಬೆಳೆಗಾರರು ನೋವಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಕೊಬ್ಬರಿ ಧಾರಣೆ ಇಳಿದು ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಸವಿವರವಾಗಿ ಬರೆದಿದ್ದಾರೆ.

ಒಂದು ವರ್ಷದಲ್ಲಿ ಸಾಕಷ್ಟು ಏರಿಳಿತ ಕಂಡ ಕೊಬ್ಬರಿ 18 ಸಾವಿರದಿಂದ 11 ಸಾವಿರಕ್ಕೆ ಬಂದಿದೆ. ನಿತ್ಯ ಏರಿಳಿತ ಕಂಗಾಲಾಗಿರುವ ರೈತರಿಗೆ ಅನುವು ಮಾಡಲು ಕ್ವಿಂಟಾಲ್ ಕೊಬ್ಬರಿ 20 ಸಾವಿರ ನಿಗದಿತ ಬೆಂಬಲ ಬೆಲೆ ನೀಡಿ ನೆಫೆಡ್ ಮೂಲಕ ಖರೀದಿ ಮಾಡಲು ಆಗ್ರಹಿಸಿ ಪತ್ರ ಬರೆಯಲಾಗಿದೆ. ತುರುವೇಕೆರೆ ಶಾಸಕರ ಈ ರೈತ ಪರ ಕೆಲಸಕ್ಕೆ ಸಾಥ್ ನೀಡಿದ ಶಾಸಕರಾದ ಜ್ಯೋತಿ ಗಣೇಶ್, ಡಾ.ರಾಜೇಶ್ ಗೌಡ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಈ ಬಗ್ಗೆ ಪ್ರಸ್ತಾಪ ಮಾಡಲು ನಿಯಮ 69 ರಡಿ ಚರ್ಚಿಸಲು ಸಮಯ ನೀಡಲು ಪತ್ರದಲ್ಲಿ ಮನವಿ ಮಾಡಿದ್ದಾರೆ.