ಮಧುಗಿರಿ: ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಕೋಡಗದಾಲ ಗ್ರಾಮ ಪಂಚಾಯಿತಿಯಲ್ಲಿ ದಲಿತ ಜನಾಂಗಕ್ಕೆ ಸೇರಿದ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಮೇಲ್ವರ್ಗದ ಅಧ್ಯಕ್ಷರ ಪತಿ, ಸದಸ್ಯರು ಮತ್ತು ಸಿಬ್ಬಂದಿ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮುಂದೆ ಜಿಲ್ಲಾ ಸಂಚಾಲಕರಾದ ಡಾ.ದೊಡ್ಡೇರಿ ಕಣಿಮಯ್ಯ ನೇತೃತ್ವದಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದೊಡ್ಡೇರಿ ಕಣಿಮಯ್ಯ ಕೋಡಗದಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಪತಿ, ಸದಸ್ಯರು ಮತ್ತು ಸಿಬ್ಬಂದಿ ದಲಿತರ ಕೆಲಸ-ಕಾರ್ಯಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಡದೆ ಜಾತಿ ತಾರತಮ್ಯ ಮಾಡಿ ದಲಿತರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಮತ್ತು ಅಶ್ವತ್ಥನಾರಾಯಣ ಅವರನ್ನು ದಲಿತರೆಂದು ಕಿರುಕುಳ ನೀಡಿ ಬೇರೆಡೆಗೆ ವರ್ಗಾವಣೆ ಮಾಡಿದ್ದರು. ಈಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಸೌಮ್ಯವತಿ ಅವರಿಗೂ ದಲಿತರೆಂದು ಅಧ್ಯಕ್ಷರ ಪತಿ, ಸದಸ್ಯರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಬಿಡದೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಗ್ರಾಮದ ವಾಸಿಯಾದ ನಾಗರಾಜು ಮಾತನಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯವತಿ ಗ್ರಾಮ ಪಂಚಾಯಿತಿಗೆ ಬಂದು ಸುಮಾರು ೫ ತಿಂಗಳಾಗಿದೆ. ಇವರು ಬಂದ ಮೇಲೆ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಭ್ರಷ್ಟಚಾರ ನಡೆಯಲು ಅವಕಾಶ ಕೊಟ್ಟಿಲ್ಲ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಗೆ ಬರುವ ಜನರೊಂದಿಗೂ ಸೌಜನ್ಯಯುತವಾಗಿ ವರ್ತಿಸಿ ಅವರ ಕೆಲಸ-ಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಆದರೆ, ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಜಾತಿ ತಾರತಮ್ಯ ಮಾಡಿ ಪಿಡಿಓ ಸೌಮ್ಯವತಿಯವರ ಅದೇಶ ಪಾಲಿಸದೇ sಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಡದೇ ಸತಾಯಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಾಲ್ಲೂಕು ಯೋಜನಾಧಿಕಾರಿ ಮಧುಸೂದನ್ ಮಾತನಾಡಿ ಪಂಚಾಯಿತಿ ಅಧಿಕಾರಿ ಸೌಮ್ಯವತಿ ಅವರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ದೊಡ್ಡೇರಿ ಕಣಿಮಯ್ಯ, ಜಿವಿಕಾ ಸಂಘಟನೆಯ ಮಂಜುನಾಥ್, ಕಲಾವಿದ ಸಂಜೀವಯ್ಯ ಸಿದ್ದಾಪುರ, ಕೆ ಶಿವಣ್ಣ, ಮಲೇರಂಗಯ್ಯ, ರಂಗಯ್ಯ, ನಾಗರಾಜ್, ಕುಮಾರ್, ರಾಂಮಾಜಿ, ಪ್ರಸನ್ನ ಕುಮಾರ್, ಪ್ರಕಾಶ್ ಪ್ರಕಾಶ್, ರಾಮಾಂಜೀ , ಕುಮಾರ್, ಪ್ರಸನ್ನಕುಮಾರ್, ರಂಗ, ಬಾಲರಾಜ್, ನರಸಿಂಹರಾಜು, ಎನ್.ಎನ್.ಮೂರ್ತಿ, ರಘು, ರಾಜ, ನರಸಿಂಹಮೂರ್ತಿ, ಬದ್ರೀ, ಕೆಂಗ ದಾಸಪ್ಪ ಮತ್ತಿತರರು ಇದ್ದರು.