ಗುಬ್ಬಿ: ಪಟ್ಟಣದ ಬಸ್ ನಿಲ್ದಾಣ ಬಳಿಯ ರೈತ ಸಂಘದ ನಾಮಫಲಕ ಬಳಿ ಬಾವುಟ ಹಾರಿಸಿ, ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ 75 ನೇ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ವಿಶ್ವ ರೈತ ದಿನಾಚರಣೆಯನ್ನು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಆಚರಿಸಿದರು.
ಪಟ್ಟಣದ ಬಳಿ ರೈತ ಹೋರಾಟಕ್ಕೆ ಘೋಷಣೆ ಕೂಗಿ ಸಂಘದ ಬಾವುಟ ಹಾರಿಸಿದರು. ತಾಲ್ಲೂಕಿನ ಎಲ್ಲಾ ರೈತರ ಮನೆಗಳ ಮೇಲೆ ಬಾವುಟ ಹಾರಿಸಿ ವಿಶ್ವ ರೈತ ದಿನಾಚರಣೆ ಆಚರಿಸಿ ಸಿಹಿ ಹಂಚಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ದೇಶದ ಬೆನ್ನೆಲುಬು ರೈತ ವರ್ಗಕ್ಕೆ ಸೂಕ್ತ ಸಹಕಾರ ಸಿಗಲಿಲ್ಲ. ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲದ ಹಿನ್ನಲೆ ರೈತ ಹೋರಾಟ ನಿರಂತರವಾಗಿ ನಡೆದಿದೆ. ವಿಶ್ವ ರೈತರ ದಿನಾಚರಣೆ ಆಚರಣೆಗೆ ಅರ್ಥ ಬರಲು ರೈತರನ್ನು ಶ್ರಮ ಜೀವಿ ವರ್ಗವಾಗಿ ಸತ್ಕರಿಸಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕು. ಈ ಹಿನ್ನಲೆ ನಿರಂತರ ಹೋರಾಟ ಮಾಡಿದ ಪುಟ್ಟಣ್ಣಯ್ಯ ಅವರನ್ನು ಸ್ಮರಿಸುವ ಕರ್ತವ್ಯ ಎಲ್ಲಾ ರೈತರಿಗೆ ಸಂಬಂಧಿಸಿದೆ ಎಂದರು.
ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ತಾಲ್ಲೂಕಿನಲ್ಲಿ ರೈತರ ಮನೆ ಮೇಲೆ ರೈತ ಸಂಘದ ಬಾವುಟ ಹಾರಿಸಿ ವಿಶ್ವ ರೈತ ದಿನಾಚರಣೆಗೆ ಗೌರವ ಸೂಚಿಸಲಾಯಿತು. ಇದೇ ಸಂದರ್ಭ ಹೋರಾಟಗಾರ ಪುಟ್ಟಣ್ಣಯ್ಯ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ರೈತರ ಕಷ್ಟ ನಿವಾರಣೆಗೆ ರೈತರೇ ಹುಡುಕಬೇಕಿದೆ. ಸರ್ಕಾರ ನಮ್ಮಗಳ ಸಂಕಷ್ಟ ಆಲಿಸಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಶಕ್ತಿ ದುಪ್ಪಟ ಆಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಕೆ.ಲೋಕೇಶ್, ಸತ್ತಿಗಪ್ಪ, ಚನ್ನಿಗಪ್ಪ, ಸುರೇಶ್, ಕುಮಾರ್, ದೇವೇಗೌಡ, ಸಿಂಗರಣ್ಣ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.