ಗುಬ್ಬಿ : ಕುರಿ ರೊಪ್ಪಕ್ಕೆ ನುಗ್ಗಿದ ಚಿರತೆ ಎಂಟು ಕುರಿಗಳನ್ನು ಬಲಿ ಪಡೆದು ಎರಡು ಕುರಿಗಳನ್ನು ಹೊತ್ತೊಯ್ದ ಘಟನೆ ಶನಿವಾರ ಮುಂಜಾನೆ ಗುಬ್ಬಿ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಲಕ್ಷ್ಮಮ್ಮ ಗಂಗಣ್ಣ ಅವರು ಸಾಕಿದ ಕುರಿಗಳನ್ನು ಸಾಕುವ ರೊಪ್ಪಕ್ಕೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿದ್ದು ಎಂಟು ಕುರಿಗಳ ಕತ್ತು ಸೀಳಿ ಬಲಿ ಪಡೆದಿದೆ.
ಕುರಿ ಸಾಕುವ ಕಾಯಕದಲ್ಲಿರುವ ಈ ಬಡ ಕುಟುಂಬ ಜೀವನೋಪಾಯಕ್ಕೆ ಇದ್ದ ಕುರಿಗಳನ್ನು ಕಳೆದುಕೊಂಡ ಬೀದಿಪಾಲಾಗಿದ್ದು ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ರೂಗಳ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಕಳೆದ ಗುರುವಾರ ಕಸಬ ಹೋಬಳಿ ಹೇರೂರು ಗ್ರಾಮದ ಬಳಿ ಹಾಡುಹಗಲೇ ಸುಮಾರು ಮೂರು ಚಿರತೆಗಳು ರಸ್ತೆ ದಾಟುವಾಗ ವಾಹನ ಸವಾರರಿಗೆ ಅಡ್ಡ ಸಿಕ್ಕ ಘಟನೆ ನಡೆದ ಬೆನ್ನಲ್ಲೇ ಚಿರತೆ ದಾಳಿ ನಡೆಸಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
ಪದೇ ಪದೇ ತಾಲೂಕಿನಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಹೆಚ್ಚಾಗುತ್ತಿದ್ದು. ಯಾವುದೇ ಕ್ಷಣದಲ್ಲಿ ಮನುಷ್ಯರ ಮೆಲೇರುಗುವ ಭಯ ಸ್ಥಳೀಯ ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಈ ನಿಟ್ಟಿನಲ್ಲಿ ಚಿರತೆಗಳ ಉಪಟಳವನ್ನು ತಪ್ಪಿಸಬೇಕು ಎಂದು ಮುದ್ದನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.