ಚಿಕ್ಕನಾಯಕನಹಳ್ಳಿ: ಸಾಲಮನ್ನಾ ಬದಲು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತರ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಎನ್.ಲೊಕೇಶ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನದ ಅಂಗವಾಗಿ ಕಿಸಾನ್ ಗೋಷ್ಟಿ ಉದ್ಘಾಟಿಸಿ ಮಾತನಾಡಿದರು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತತ್ತರಿಸಿದ್ದಾರೆ. ತೆಂಗು, ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ರೋಗ-ರುಜನೆಗಳ ಕಾಟ ಕಾಡುತ್ತಿದೆ ಎಂದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್.ರೇಣುಕಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಉತ್ಪಾದಕರಾಗಬೇಕು. ತಯಾಗುತ್ತಿರುವ ಆಹಾರ ಪದಾರ್ಥಗಳು ರೈತರು ಬೆಳೆದ ಕಚ್ಚಾವಸ್ತುಗಳೇ ಬೇಕಾಗಿದೆ. ರೈತರಿಂದ ಕಡಿಮೆ ಬೆಲೆಗೆ ಕೊಂಡು ಮಧ್ಯವರ್ತಿಗಳು ಲಾಭ ಗಳಿಸುತ್ತಾರೆ ಎಂದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ, ರೇಷ್ಮೆ ಇಲಾಖೆ ಈರಯ್ಯ, ಸಾಮಾಜಿಕ ಅರಣ್ಯ ಇಲಾಖೆ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಮಲ್ಲಿಕಾರ್ಜುನ್, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುದರ್ಶನ್ ರೈತರಿಗೆ ಮಾಹಿತಿ ನೀಡಿದರು. ತಾಲ್ಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು, ರೈತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಗತಿಪರ ರೈತರಾದ ಜಿ.ಎಸ್.ಸಿದ್ದರಾಮಯ್ಯ, ರಂಗನಕೆರೆ ಮಹೇಶ್, ಗಿರಿಯಪ್ಪ, ಗೋವರ್ಧನ್ ಅವರುಗಳನ್ನು ಸನ್ಮಾನಿಸಲಾಯಿತು.