ಗುಬ್ಬಿ: ಖಾಸಗಿ ಏಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂಡ ಸಾಲ ಪಡೆದು ತೀರಿಸಲು ಪರದಾಡಿದ ರೈತನ ಮನೆ ಜಪ್ತಿ ಮಾಡಿದ ಹಿನ್ನಲೆ ಮರ್ಯಾದೆಗೆ ಅಂಜಿದ ರೈತ ಎತ್ತಿನಹೊಳೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಆಕ್ರೋಶಗೊಂಡ ನೂರಾರು ರೈತರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.
ತುಮಕೂರಿನ ಖಾಸಗಿ ಫೈನಾನ್ಸ್ ಬ್ಯಾಂಕ್ ಏಕ್ವಿಟಾಸ್ ಮೂಲಕ ಮೂರು ಲಕ್ಷ ಸಾಲ ಪಡೆದ ಚೇಳೂರು ಹೋಬಳಿ ಮೆಣಸಿನಹಟ್ಟಿ ಗ್ರಾಮದ ಪಂಚಾಕ್ಷರಿ (35) ಕೃಷಿ ನಡೆಸುತ್ತಲೇ ಒಂದು ಲಕ್ಷ ಸಾಲ ತೀರಿಸಿದ್ದ. ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಈತ ಉಳಿದ ಸಾಲ ತೀರಿಸಲು ಸಾಧ್ಯವಾಗದೆ ಪರದಾಡುವ ವೇಳೆ ಫೈನಾನ್ಸ್ ಕಾನೂನು ಎನ್ನುತ್ತಲೇ ಆತನ ಮನೆಗೆ ಬೀಗ ಜಡಿದು ಜಪ್ತಿ ಮಾಡಿದೆ. ಈ ಅವಮಾನ ಸಹಿಸದ ಪಂಚಾಕ್ಷರಿ ಕೆರೆಗೆ ಹಾರಿ ಆತ್ಮಹತ್ಯೆ ಶರಣಾದ. ಮೂರು ದಿನದ ಬಳಿಕ ಶವ ಹೊರತೆಗೆದ ಈ ಹಿನ್ನಲೆ ರೊಚ್ಚಿಗೆದ್ದ ಗ್ರಾಮಸ್ಥರು ಖಾಸಗಿ ಬ್ಯಾಂಕ್ ವಿರುದ್ದ ಸಿಡಿದು ಶವವನ್ನು ಹೊತ್ತು ಗುಬ್ಬಿ ತಾಲ್ಲೂಕು ಕಛೇರಿ ಮುಂದೆ ಧರಣಿ ಮಾಡಲು ಚೇಳೂರು ಮೂಲಕ ಬರುವಾಗ ಪಟ್ಟಣ ಸಮೀಪದಲ್ಲೇ ರೈಲ್ವೇ ಅಂಡರ್ ಪಾಸ್ ಬಳಿ ಅಡ್ಡಗಟ್ಟಿದ ಪೊಲೀಸರಿಗೂ ಗ್ರಾಮಸ್ಥರಿಗೂ ವಾಗ್ವಾದ ಆರಂಭವಾಯಿತು. ತಾಲ್ಲೂಕು ಕಛೇರಿಗೆ ಶವ ತಾರದೆ ಆಸ್ಪತ್ರೆಗೆ ಹೊಯ್ಯಲು ಸೂಚಿಸಿದ ಹಿನ್ನಲೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ವಾಹನ ಅಡ್ಡ ನಿಲ್ಲಿಸಿದ ಕಾರಣ ಆಕ್ರೋಶಗೊಂಡ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ಘೋಷಣೆ ಕೂಗಿದರು.

ಇದೇ ಸಂದರ್ಭದಲ್ಲಿ ಕೆಲ ಬಿಜೆಪಿ ಮುಖಂಡರು ಸಹ ರೈತರ ಪರ ನಿಂತು ಪೊಲೀಸರ ವಿರುದ್ಧ ದನಿಗೂಡಿಸಿದರು. ಶವವನ್ನು ಆಸ್ಪತ್ರೆಗೆ ಹೊಯ್ಯಲು ಒಪ್ಪದೇ ತಾಲ್ಲೂಕು ಕಚೇರಿ ಮುಂದಿಟ್ಟು ಪ್ರತಿಭಟಿಸಲು ಹಠ ಮಾಡಿದ್ದರು. ಇದೇ ಸಂದರ್ಭ ತಾರಕ್ಕೇರಿದ ಮಾತು ವಾಗ್ವಾದಕ್ಕೆ ತಿರುಗಿತು. ಅಲ್ಲಿಂದ ಶವದ ವಾಹನ ಬಿಟ್ಟು ತಾಲ್ಲೂಕು ಕಚೇರಿಯತ್ತ ಸಾಗಿದ ಗ್ರಾಮಸ್ಥರು ಮೃತನ ಕುಟುಂಬಸ್ಥರ ಜೊತೆ ಪ್ರತಿಭಟನೆ ನಡೆಸಿದರು. ಇತ್ತ ಶವದ ವಾಹನದ ಮುಂದೆ ಮಾತುಕತೆ ನಡೆಸಿದ ರೈತ ಮುಖಂಡರು ಹಾಗೂ ಪೊಲೀಸರ ಮಧ್ಯೆ ತಹಶೀಲ್ದಾರ್ ಆರತಿ ಆಗಮಿಸಿ ಖಾಸಗಿ ಫೈನಾನ್ಸ್ ಕಂಪೆನಿ ಅಧಿಕಾರಿಗಳನ್ನು ಬರಲು ಸೂಚಿಸಿದರು.
ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ಸುಮಾರು ಮೂರು ತಾಸು ನಡೆಯಿತು. ರೈತರ ಕೃಷಿ ಈಚೆಗೆ ಸಮಸ್ಯೆಯಲ್ಲಿ ಸಿಕ್ಕಿದೆ. ಸಾಲ ತೀರಿಸಲು ಸಮಯ ನಿಗದಿ ಮಾಡುವ ಅನಿವಾರ್ಯವಿದೆ. ಆದರೆ ಖಾಸಗಿ ಫೈನಾನ್ಸ್ ಕಂಪೆನಿ ಕೇವಲ ಕಾನೂನು ಎನ್ನುತ್ತಾ ಮಾನವೀಯತೆ ಮರೆತಿದೆ. ಅನಾರೋಗ್ಯಕ್ಕೆ ತುತ್ತಾದ ಪಂಚಾಕ್ಷರಿ ಅವರಿಗೆ ಸಮಯ ನೀಡಬೇಕಿತ್ತು. ವಾಸಕ್ಕಿದ್ದ ಒಂದು ಮನೆಯನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿದ್ದು ತೀರಾ ಖಂಡನೀಯ. ಫೈನಾನ್ಸ್ ಸಿಬ್ಬಂದಿಗಳ ನಡೆ ಕೂಡಾ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಶವ ತರಲು ಅಡ್ಡಿ ಪಡಿಸಿದ್ದು ಸರಿಯಲ್ಲ. ರೈತರ ಗೋಳು ಅಲಿಸಬೇಕಿತ್ತು. ತಾಲ್ಲೂಕು ಆಡಳಿತ ಮತ್ತು ಪೊಲೀಸ್ ರೈತರ ಪರ ನಿಲ್ಲಬೇಕಿತ್ತು. ಆದರೆ ಶವ ತರಲು ಅನುವು ಮಾಡದೆ ಫೈನಾನ್ಸ್ ಪರ ನಿಂತಿದ್ದು ಖಂಡನೀಯ ಎಂದು ಕಿಡಿಕಾರಿದರು.
ಪ್ರತಿಭಟನೆ ಮುಂದುವರೆದು ಮೃತ ಪಂಚಾಕ್ಷರಿ ರೈತನ ಕುಟುಂಬಕ್ಕೆ ಪರಿಹಾರ ಹಾಗೂ ಸಾಲ ಮನ್ನಾ ಮಾಡಬೇಕು. ಕೂಡಲೇ ಖಾಸಗಿ ಫೈನಾನ್ಸ್ ಅಧಿಕಾರಿಗಳನ್ನು ಸ್ಥಳಕ್ಕೆ ಬರಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ನಂತರ ಇಕ್ವಿಟಾಸ್ ಫೈನಾನ್ಸ್ ಅಧಿಕಾರಿಗಳು ಬಂದ ನಂತರ ತಹಶೀಲ್ದಾರ್ ಹಾಗೂ ರೈತ ಮುಖಂಡರು ಚರ್ಚಿಸಿ ಸಾಲ ಮನ್ನಾ ಹಾಗೂ ಮೃತನ ಪತ್ನಿಗೆ ಉಮಾದೇವಿ ಅವರಿಗೆ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಸ್.ಪಂಚಾಕ್ಷರಿ, ಪಿ.ಬಿ.ಚಂದ್ರಶೇಖರಬಾಬು, ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ಯತೀಶ್, ಗಂಗಣ್ಣ, ಎಕೆಪಿ ರಾಜು, ಡಾಬಾರಾಜು, ನಿರಂಜನ್, ಚಿಕ್ಕೀರಪ್ಪ, ನರಸಿಂಹಮೂರ್ತಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಸಿ.ಜಿ.ಲೋಕೇಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.