ತುಮಕೂರು : ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದು ಹವಣಿಸುತ್ತಿರುವ ಜೆಡಿಎಸ್ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮದ ನಂತರ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದು,ಪಂಚರತ್ನ ರಥಯಾತ್ರೆ ನವೆಂಬರ್ 18ರಂದು ಮುಳಬಾಗಿಲು ಕ್ಷೇತ್ರದಿಂದ ಪ್ರಾರಂಭವಾಗಿ ತುಮಕೂರು ಜಿಲ್ಲೆಗೆ ಡಿಸೆಂಬರ್ 1 ರಂದು ಆಗಮಿಸಿ ಜಿಲ್ಲೆಯ ತುಮಕೂರು ನಗರ,ಮಧುಗಿರಿ, ಕೊರಟಗೆರೆ,ಪಾವಗಡ,ಶಿರಾ,ಗುಬ್ಬಿ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಸಾಗಿತು.
ನಾಲ್ಕು ದಿನ ವಿರಾಮದ ನಂತರ ಡಿಸೆಂಬರ್ 11 ರಿಂದ ಪ್ರಾರಂಭವಾಗಬೇಕಿದ್ದ ಪಂಚರತ್ನ ರಥಯಾತ್ರೆ ಅಕಾಲಿಕ ಮಳೆಯಿಂದ ಮುಂದೂಡಲಾಯಿತು.ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಮುಂದುವರೆದು ಡಿಸೆಂಬರ್ 27 ರಂದು ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರಕ್ಕೆ ಪ್ರವೇಶಿಸಿದ ಪಂಚರತ್ನ ರಥಯಾತ್ರೆ 28 ರಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮುಗಿಸಿ ಇಂದು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಆಗಮಿಸಲಿದೆ.
ಹಬ್ಬದಂತೆ ಸಿಂಗಾರಗೊಂಡ ತುಮಕೂರು ಗ್ರಾಮಾಂತರ
ಜೆಡಿಎಸ್ ಪಕ್ಷದ ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ಅವರ ಕ್ಷೇತ್ರವಾದ ತುಮಕೂರು ಗ್ರಾಮಾಂತರದಲ್ಲಿ ಪಂಚರತ್ನ ರಥಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನಿಂದ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆ ನಾಗವಲ್ಲಿ,ಹೊನ್ನುಡಿಕೆ,ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ಗೂಳೂರು ಮಾರ್ಗವಾಗಿ ಸಾಗಿ ಪಂಡಿತನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.ನಂತರ ಊರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ಯಲ್ಲಾಪುರ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ತಲುಪಲಿದ್ದು,ಬೃಹತ್ ಬಹಿರಂಗ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.ನಂತರ ಯಲ್ಲಾಪುರ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ದಲಿತ ಕುಟುಂಬದ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲು ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗಲು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಿದ್ದು ಇತಿಹಾಸ ನಿರ್ಮಾಣ ಮಾಡುವ ಕಾರ್ಯಕ್ರಮ ಇದಾಗಲಿದೆ ಎಂದು ಡಿ.ಸಿ ಗೌರಿಶಂಕರ್ ಅವರು ತಿಳಿಸಿದ್ದಾರೆ.
ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸುವಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಹೆಬ್ಬೂರಿನಲ್ಲಿ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆಗೆ ಡ್ರೌನ್ ಮೂಲಕ ಜೆಡಿಎಸ್ ಚಿನ್ಹೆವುಳ್ಳ ಫಾಗ್ ಸಿಂಪಡಣೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.ಸುಮಾರು 200 ಜೆಸಿಬಿ ಯಂತ್ರಗಳ ಮೂಲಕ ದಾರಿಯುದ್ದಕ್ಕೂ ಹೂ ಹಾಕಲು ಸಿದ್ಧತೆ ಮಾಡಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಇಲ್ಲಿಯವರೆಗೆ ಯಾರು ಹಾಕದಂತ ಹಾರಗಳನ್ನು ಹತ್ತಾರು ಕ್ರೈನ್ ಗಳ ಮೂಲಕ ಹಲವು ಬಗೆಯ ದೊಡ್ಡ ದೊಡ್ಡ ಹಾರಗಳನ್ನು ಹಾಕುವ ಮೂಲಕ ವಿಶೇಷವಾಗಿ ಹಾಗೂ ವಿಶಿಷ್ಠ ರೀತಿಯಲ್ಲಿ ಸ್ವಾಗತಿಸಲು ಸಜ್ಜಾಗಿದ್ದೇವೆ ಎಂದು ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದ್ದಾರೆ.