ಗುಬ್ಬಿ: ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿದೆ. ಸ್ವಯಂ ಉದ್ಯೋಗದ ಭರವಸೆ ಸಹ ಈ ಯೋಜನೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸಕ್ತ ರೈತರಿಗೆ ಕೈ ತೋಟ ನಿರ್ಮಾಣಕ್ಕೆ ಸಸಿ ನೀಡುವ ಮೂಲಕ ನರೇಗಾ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ ಎಂದು ತ್ಯಾಗಟೂರು ಗ್ರಾಪಂ ಅಧ್ಯಕ್ಷೆ ಭೈರಮ್ಮ ಈಶ್ವರಯ್ಯ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ತ್ಯಾಗಟೂರು ಗ್ರಾಪಂ ಕಚೇರಿ ಬಳಿ ಆಸಕ್ತ ರೈತರಿಗೆ ಸಸಿ ವಿತರಣೆ ಮಾಡುವ ಮೂಲಕ ನರೇಗಾ ಯೋಜನೆಯ ಕೈ ತೋಟ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಆಗಿದೆ. ಇದರ ಬಳಕೆಗೆ ರೈತರು ಮುಂದಾಗಬೇಕು ಎಂದರು.
ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯಂತೆ ಕೈ ತೋಟ ಮನೆಯ ಬಳಿಯಲ್ಲೇ ಇದ್ದರೂ ನಮಗೆ ಬೇಕಾದ ಸಸಿಗಳು ಬೆಳೆದುಕೊಳ್ಳದೆ ದುಡ್ಡು ಕೊಟ್ಟು ಹಣ್ಣು ತರಕಾರಿ ಖರೀದಿಸುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ಮನೆ ಬಳಿಯೇ ಕೈ ತೋಟ ಬೆಳೆಸಿಕೊಳ್ಳಿ ಎಂದು ಕರೆ ನೀಡಿದ ಅವರು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಮೂಲಕ ಶಾಲೆಗಳ ಕಾಂಪೌಂಡ್ ನಿರ್ಮಾಣ ನಡೆದಿವೆ. ಕಸ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಹೀಗೆ ಅನೇಕ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ವಿದ್ಯಾಧರ, ಸದಸ್ಯರಾದ ಶಿವಕುಮಾರಸ್ವಾಮಿ, ಲಕ್ಷ್ಮೀಪತಿ, ಓಂಕಾರ ಪ್ರಸಾದ್, ಜಗದೀಶ್, ಮಂಜುನಾಥ್, ಸುಮಾ ಶ್ರೀನಿವಾಸ್, ಶಿವಗಂಗಮ್ಮ, ಶಿವನಂಜಯ್ಯ, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡ ಈಶ್ವರಯ್ಯ, ಪಿಡಿಓ ವನಜಾಕ್ಷಿ, ಕಾರ್ಯದರ್ಶಿ ಭಾಸ್ಕರ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.